ಬಂಗ್ರಕೂಳೂರು: ಫಲ್ಗುಣಿ ನದಿ ದಂಡೆಯಿಂದ 11 ಲೋಡ್ ತ್ಯಾಜ್ಯ ರಾಶಿ ಸಂಗ್ರಹ
ಬಂಗ್ರಕೂಳೂರು:ಜು 15. ಮಳೆಯಿಂದಾಗಿ ಹೊಳೆ, ತೋಡಿನಿಂದ ಹರಿದು ಫಲ್ಗುಣಿ ನದಿ ಸೇರಿದ ಒಟ್ಟು 11 ಲೋಡ್‌ಗೂ ಅಧಿಕ ತ್ಯಾಜ್ಯವನ್ನು ಪರಿಸರ ಪ್ರೇಮಿಗಳು ಗುರುವಾರ ಸ್ವಚ್ಛಗೊಳಿಸಿ ತ್ಯಾಜ್ಯ ವಿಲೇವಾರಿ ಮಾಡಿದರು.
ನೆರೆ ನೀರಿನಿಂದ ಹೊಳೆ, ತೋಡುಗಳ ಮೂಲಕ ಹರಿದು ಬಂದ ತ್ಯಾಜ್ಯವು ಫಲ್ಗುಣಿ ನದಿ ಸೇರಿತ್ತು. ನದಿ, ತೋಡುಗಳಲ್ಲಿ ಎಸೆದ ವಿವಿಧ ರೀತಿಯ ತ್ಯಾಜ್ಯ ಇದರಲ್ಲಿ ಸೇರಿತ್ತು. ಕಳೆದ ಐದು ದಿನಗಳಿಂದ ಸುರಿದ ಭಾರೀ ಮಳೆಗೆ ಬಂಗ್ರಕೂಳೂರು ನದಿ ದಂಡೆಯಲ್ಲಿ ಶೇಖರಣೆಗೊಂಡ ಈ ತ್ಯಾಜ್ಯವನ್ನು ಭವಿಷ್ಯದ ಅಪಾಯ ತಡೆಯುವ ಮುನ್ನೆಚ್ಚರಿಕೆಯಾಗಿ ಪರಿಸರ ಪ್ರೇಮಿಗಳ ತಂಡವು ಸ್ವಚ್ಚಗೊಳಿಸಿತು. ಪರಿಸರಾಸಕ್ತರ ತಂಡ, ಸ್ಕೂಲ್ ಆಫ್ ರೋಶನಿ ನಿಲಯ, ಸಿಒಡಿಪಿ ವಿದ್ಯಾರ್ಥಿಗಳ ಸಹಿತ 27 ಮಂದಿ ಭಾಗವಹಿಸಿದ್ದರು.
ಪ್ಲಾಸ್ಟಿಕ್, ಬಾಟಲಿಗಳು, ಗಾಜು, ಸ್ಯಾನಿಟರಿ ಪ್ಯಾಡ್ ಸಹಿತ ಕಸ ಕಡ್ಡಿಗಳು ನದಿಯಲ್ಲಿ ಶೇಖರಣೆಗೊಂಡಿದ್ದವು. ಸಂಗ್ರಹಿಸಲಾದ ತ್ಯಾಜ್ಯದ ಪೈಕಿ ನಾಲ್ಕು ಟ್ರಕ್ ಕಸವನ್ನು ಮರು ಸಂಸ್ಕರಣೆಗೆ ಬಳಸಲಾಗಿದೆ. ಸಂಸ್ಕರಣೆಗೆ ಯೋಗ್ಯವಲ್ಲದ ಏಳು ಲೋಡ್ ಕಸವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಕಳುಹಿಸಲಾಯಿತು ಎಂದು ಪರಿಸರಪ್ರೇಮಿ ಜೀತ್ ಮಿಲನ್ ತಿಳಿಸಿದ್ದಾರೆ.