Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಸಿಎಂ ಕೊಡಗು ಭೇಟಿ -ಗುಡ್ಡ ಕುಸಿತ, ಮನೆ ಹಾನಿ ಪ್ರದೇಶ ಪರಿಶೀಲನೆ, ಪರಿಹಾರ ವಿತರಣೆ

ಮಡಿಕೇರಿ: ಜಿಲ್ಲೆಯಲ್ಲಿ ಅಪಾಯದಲ್ಲಿದ್ದ ಕೆಲವು ಮನೆಗಳನ್ನು ಸ್ಥಳಾಂತರಿಸಲಾಗಿದ್ದು, ಕೆಲವರು ಕಾಳಜಿ ಕೇಂದ್ರದಲ್ಲಿದ್ದಾರೆ. ಇನ್ನು ಕೆಲವರು ಸಂಬಂಧಿಕರ ಮನೆಗಳಲ್ಲಿದ್ದಾರೆ. ಸಂಬಂಧಿಕರ ಮನೆಗಳಲ್ಲಿರುವವರಿಗೂ ಕೂಡ ಅಕ್ಕಿ, ಎಣ್ಣೆ, ಬೇಳೆ, ವಿತರಣೆಗೆ ಸೂಚಿಸಲಾಗಿದೆ. ಕಾಳಜಿ ಕೇಂದ್ರದಿಂದ ಮನೆಗೆ ತೆರಳುವ ಸಂದರ್ಭದಲ್ಲಿಯೂ ಅವರಿಗೆ ಪಡಿತರವನ್ನು ಕೊಟ್ಟು ಕಳುಹಿಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ.

ಮಡಿಕೇರಿಯಲ್ಲಿಂದು ಮಳೆಯಿಂದ ಹಾನಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಗ್ರಾಮೀಣ ಪ್ರದೇಶದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದ್ದು, ಅಗತ್ಯ ಬಿದ್ದರೆ ಇನ್ನಷ್ಟು ಅನುದಾನವನ್ನು ಒದಗಿಸಲಾಗುವುದು ಎಂದರು.

ನದಿಪಾತ್ರದ ಹೂಳು ತೆಗೆಯಲು ಕ್ರಮ: ಕೊಡಗು ಜಿಲ್ಲೆಯ ನಾಲ್ಕು ತಹಶೀಲ್ದಾರರ ಖಾತೆಗಳಲಿ ತಲಾ 25 ಲಕ್ಷ ರೂ.ಗಳು ಲಭ್ಯವಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 50 ಸಾವಿರ ರೂ.ಗಳನ್ನು ಈಗಾಗಲೇ ಒದಗಿಸಲಾಗಿದೆ. ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿ ಹೂಳು ತುಂಬಿದೆ. ಅದರ ಜೊತೆಗೆ ನೀರಿನ ಹರಿವಿನಿಂದ ನೀರು ಹೊರಗೆ ಹರಿಯುತ್ತಿದೆ. ಇದನ್ನು ತಪ್ಪಿಸಲು ಹಾರಂಗಿ ಜಲಾಶಯದ ಹಿಂದಿನ ಪ್ರದೇಶಕ್ಕೆ ಈಗಾಗಲೇ 40 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, ಕೆಲಸ ಕೂಡಲೇ ಪ್ರಾರಂಭವಾಗುತ್ತದೆ ಎಂದರು.

ಹೂಳು, ಮಣ್ಣು ತೆಗೆಯುವುದು ಹಾಗೂ ಗೋಡೆ ನಿರ್ಮಾಣ ಕಾರ್ಯವನ್ನು ಇದು ಒಳಗೊಂಡಿದೆ. ಕಾವೇರಿ ನದಿಯಲ್ಲಿನ ಹೂಳು ತೆಗೆಯಲು ಕಾವೇರಿ ನೀರಾವರಿ ನಿಗಮಕ್ಕೆ ಸೂಚಿಸಲಾಗಿದೆ. ನೀರು ನಿಲ್ಲದಂತೆ ಮಾಡಲು ಕ್ರಮ ಕೈಗೊಳ್ಳಲು ಹಾಗೂ ಮರದ ದಿಮ್ಮಿಗಳನ್ನು ಕೂಡಲೇ ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಕಳೆದ ಬಾರಿಯ ದಿಮ್ಮಿಗಳು ಹಾಗೆಯೇ ಉಳಿದುಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು, ನದಿ ಪಾತ್ರದಲ್ಲಿ ಯಾವುದೇ ಮರದ ದಿಮ್ಮಿಗಳು ಇರಬಾರದು ಎಂದು ಸೂಚಿಸಲಾಗಿದೆ ಎಂದರು.

ಜುಲೈ ತಿಂಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸಣ್ಣ ಪ್ರಮಾಣದ ಭೂಕುಸಿತವಾಗಿ ಸಂಚಾರ ಕಡಿತಗೊಂಡಿದೆ. ಮನೆಗಳು ಹಾನಿಗೊಳಗಾಗಿವೆ. ನದಿ ಪಾತ್ರಗಳು ಉಕ್ಕಿ ಹರಿದು ಪಕ್ಕದಲ್ಲಿರುವ ಜಮೀನುಗಳಿಗೆ ಹಾಗೂ ಮನೆಗಳಿಗೆ ನೀರುನುಗ್ಗಿದೆ. ರಸ್ತೆಗಳು ಹಾನಿಗೊಳಗಾಗಿದ್ದು, ಸೇತುವೆಗಳು ಮಣ್ಣು ಮತ್ತು ಮರದ ದಿಮ್ಮಿಗಳಿಂದ ತುಂಬಿವೆ. ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಇವೆಲ್ಲವನ್ನೂ ಇಂದು ಪರಿಶೀಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಬಾರಿಯ ಮುಂಗಾರಿನಲ್ಲಿ ಹತ್ತು ದಿನಗಳೊಳಗೆ ಶೇ. 114% ಮಳೆಯಾಗಿದ್ದು, ಇದುವರೆಗೂ ಸಂಪೂರ್ಣವಾಗಿ ಹಾನಿಗೊಳಗಿರುವುದು ಎರಡು, ತೀವ್ರ ಗತಿಯಲ್ಲಿ ಹಾನಿಯಾಗಿರುವುದು 15, ಭಾಗಶ: ಹಾನಿಗೊಳಗಾಗಿರುವುದು 63. ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳಿಗೆ 5 ಲಕ್ಷ ರೂ.ಗಳು, ತೀವ್ರ ಹಾನಿಯಾದ ಮನೆಗಳಿಗೆ 3 ಲಕ್ಷ ರೂ.ಗಳು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಕೂಡಲೇ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಿದ್ದುಹೋಗಿರುವ ಮನೆಗಳಿಗೆ ತುರ್ತು ವ್ಯವಸ್ಥೆಗಾಗಿ ಈಗಾಗಲೇ 10 ಸಾವಿರ ರೂ.ಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಭೂಕುಸಿತ, ಭೂಕಂಪನಗಳ ಅಧ್ಯಯನ: ಜಿಲ್ಲೆಯಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಭೂಕುಸಿತ ಮತ್ತು ಭೂಕಂಪನಗಳ ಅಧ್ಯಯನ ನಡೆಸಲು ತಜ್ಞರ ತಂಡಗಳು ಕೊಡಗಿಗೆ ಭೇಟಿ ನೀಡಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಖಚಿತಪಡಿಸಿದರು.

ಜಿಲ್ಲೆಯಲ್ಲಿ ನಿರ್ದಿಷ್ಟ ವಲಯಗಳಿವೆ, ಅವು ಭೂಕುಸಿತಕ್ಕೆ ಗುರಿಯಾಗುತ್ತವೆ ಮತ್ತು ಆಗಾಗ್ಗೆ ಭೂಕಂಪನಗಳನ್ನು ದಾಖಲಿಸುತ್ತವೆ. ನ್ಯಾಷನಲ್ ಜಿಯಾಗ್ರಫಿಕ್ ಇನ್‌ಸ್ಟಿಟ್ಯೂಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೆಟೀರಿಯಲ್ಸ್ ಸೈನ್ಸ್, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳ ಭೂವಿಜ್ಞಾನ ವಿಭಾಗಗಳು ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳಿಗೆ ನಾನು ಪತ್ರ ಬರೆದಿದ್ದೇನೆ. ಸಂಸ್ಥೆಗಳ ತಜ್ಞರು ಭೂಪ್ರದೇಶವನ್ನು ಅಧ್ಯಯನ ಮಾಡುತ್ತಾರೆ ಮತ್ತು ಅಧ್ಯಯನ ವರದಿಯನ್ನು ಅನುಸರಿಸಿ ಶಾಶ್ವತ ಪರಿಹಾರ ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ದುರ್ಬಲ ಪ್ರದೇಶಗಳಲ್ಲಿ ನೆಲೆಗೊಂಡಿರುವ ಮನೆಗಳನ್ನು ಮರುಹೊಂದಿಸಿ ಭದ್ರಗೊಳಿಸಲು ಕ್ರಮಗಳನ್ನು ರೂಪಿಸಲಾಗುವುದು. ವಿಪತ್ತು ನಿಯಂತ್ರಣಕ್ಕೆ ಅಧ್ಯಯನದ ಶಿಫಾರಸುಗಳ ಪ್ರಕಾರ ನಾವು ತಾಂತ್ರಿಕ ಬೆಂಬಲವನ್ನು ಬಳಸಿಕೊಳ್ಳುತ್ತೇವೆ ಎಂದು ಬೊಮ್ಮಾಯಿ ವಿವರಿಸಿದರು.

No Comments

Leave A Comment