
ಅದಮಾರು ಶ್ರೀ ವಿಶ್ವಪ್ರಿಯತೀರ್ಥರಿಗೆ ಗುರುವಂದನೆ-ನರಹರಿತೀರ್ಥ ಪ್ರಶಸ್ತಿ ವಿತರಣೆ (48pic)
ಉಡುಪಿ: ಅದಮಾರು ಮಠದ 32ನೇ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಪ್ರಯುಕ್ತ ಶ್ರೀಕೃಷ್ಣ ಸೇವಾ ಬಳಗ ಹಾಗೂ ಅದಮಾರು ಮಠ ವತಿಯಿಂದ ಸೋಮವಾರ ಇಲ್ಲಿನ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಗುರುವಂದನೆ ಸಮಾರಂಭವು ಸೋಮವಾರದ೦ದು ನಡೆಯಿತು.
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರನ್ನು ಗೌರವಿಸಿ, ತಮ್ಮ ಗುರುಗಳು ತಮಗೆ ಆಚಾರ್ಯ ಮಧ್ವ ಸ್ವರೂಪಿಗಳು ಎಂದು ಬಣ್ಣಿಸಿದರು.ದೇವ ಪ್ರೇಮದೊಂದಿಗೆ ದೇಶಪ್ರೇಮ ರೂಢಿಸಿಕೊಳ್ಳಬೇಕು. ಅದಕ್ಕಾಗಿ ವಿಶ್ವಾರ್ಪಣಂನಂಥ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.
ಗೀತೆಯಿಂದ ಪರಿಹಾರ
ಸನ್ಮಾನ ಸ್ವೀಕರಿಸಿದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಎಲ್ಲ ಸಮಸ್ಯೆಗಳಿಗೂ ಗೀತೆಯಿಂದ ಪರಿಹಾರ ಲಭ್ಯ. ಅದನ್ನು ಪಠ್ಯದಲ್ಲಿ ಸೇರಿಸುವುದು ಉತ್ತಮ. ಆದರೆ, ಹಾಗೆ ಮಾಡಿದಲ್ಲಿ ವಿರೋಧ ವ್ಯಕ್ತವಾಗುವುದು ಭಾರತೀಯರ ದೌರ್ಭಾಗ್ಯ ಎಂದರು.
ಶ್ರೀಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಮಾತನಾಡಿದರು. ಶ್ರೀಗಳ ಶಿಷ್ಯ ಕರ್ನೂಲು ವಿದ್ವಾನ್ ಶ್ರೀನಿವಾಸ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ಓಂಪ್ರಕಾಶ್ ಭಟ್ ಮತ್ತು ದೇವಿದಾಸ್ ಸಂಪಾದಕತ್ವದಲ್ಲಿ ಕೃಷ್ಣಪ್ರಿಯ- ವಿಶ್ವಪ್ರಿಯ ಪುಸ್ತಕ ಮತ್ತು ವಿಶ್ವೇಶದಾಸ ಮತ್ತು ಓಂ ಪ್ರಕಾಶ ಭಟ್ ಸಂಪಾಕತ್ವದಲ್ಲಿ 2020- 22ರ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ ವಿಶ್ವಪ್ರಿಯ- ಈಶಪ್ರಿಯ ಪುಸ್ತಕಗಳ ಅನಾವರಣ ನಡೆಯಿತು.
ಎಂಜಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಮಂಜುನಾಥ ನಿರ್ದೇಶನದಲ್ಲಿ ಸಿದ್ಧಗೊಂಡ ಅದಮಾರು ಶ್ರೀಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ಪ್ರವಚನಕಾರ ಜೋಸೆಫ್ ಇದ್ದರು.
ನರಹರಿತೀರ್ಥ ಪ್ರಶಸ್ತಿ
ಅದಮಾರು ಮಠ ವತಿಯಿಂದ ನೀಡಲಾಗುವ, 50 ಸಾವಿರ ರೂ. ನಗದು ಸಹಿತ ತೃತೀಯ ವರ್ಷದ ಶ್ರೀ ನರಹರಿತೀರ್ಥ ಪ್ರಶಸ್ತಿಯನ್ನು ಪೆರುವೋಡಿ ನಾರಾಯಣ ಭಟ್ಟ ಪುತ್ತೂರು ಅವರಿಗೆ ಪ್ರದಾನ ಮಾಡಲಾಯಿತು.
ಅರ್ಥಧಾರಿ, ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ಟ ಪ್ರಶಸ್ತಿ ಕುರಿತು ಮಾತನಾಡಿದರು. ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಸ್ವಾಗತಿಸಿದರು. ಬಳಗದ ಸಂಚಾಲಕ ಡಾ| ಜಗದೀಶ್ ಶೆಟ್ಟಿ, ವೈ. ಎನ್. ರಾಮಚಂದ್ರ ರಾವ್ ಮೊದಲಾದವರಿದ್ದರು. ಪ್ರಾಧ್ಯಾಪಕ ಡಾ| ರಮೇಶ್ ಭಟ್ ನಿರೂಪಿಸಿದರು.
ಶಾಸಕ ರಘುಪತಿ ಭಟ್, ಯಶಪಾಲ ಸುವರ್ಣ, ಪ್ರದೀಪ ಕುಮಾರ್ ಕಲ್ಕೂರ,ಹರಿಕೃಷ್ಣಪುನರೂರು,ಎ೦.ಬಿ ಪುರಾಣಿಕ್,ಅಸ್ರಣ್ಣ ರವರು ಉಡುಪಿಯ ಖ್ಯಾತ ವೈದ್ಯರಾದ ಡಾ.ಜಿ.ಎಚ್ .ಚ೦ದ್ರಶೇಖರ್ ,ಉಡುಪಿಯ ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ ಶೆಟ್ಟಿ,ಸುರೇಶ್ ಶೆಟ್ಟಿ ಗುರ್ಮೆ, ರ೦ಜನ್ ಕಲ್ಕೂರ್, ಈಶ್ವರ ಶೆಟ್ಟಿ ಚಿಟ್ಪಾಡಿ ಸೇರಿದಂತೆ ಅನೇಕ ಮಂದಿ ಶ್ರೀಗಳ ಅಭಿಮಾನಿಗಳು ಶ್ರೀಪಾದರನ್ನು ಗೌರವಿಸಿದರು.ಸಭಾ ಕಾರ್ಯಕ್ರಮದ ಬಳಿಕ `ಬ್ರಹ್ಮಕಪಾಲ’ ಯಕ್ಷಗಾನ ಪ್ರದರ್ಶನಗೊಂಡಿತು
