ಉದಯಪುರ ಟೈಲರ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬ ‘ಬಿಜೆಪಿ ಸದಸ್ಯ’: ಕಾಂಗ್ರೆಸ್ ಆರೋಪ
ನವದೆಹಲಿ: ರಾಜಸ್ತಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ರ ಅಮಾನುಷ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಬಿಜೆಪಿ ಸದಸ್ಯ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕಾರಣಕ್ಕಾಗಿ ಪ್ರಕರಣವನ್ನು ತ್ವರಿತವಾಗಿ ಎನ್‌ಐಎಗೆ ವರ್ಗಾಯಿಸಿತೇ ಎಂದು ಕಾಂಗ್ರೆಸ್ ಸಂದೇಹ ವ್ಯಕ್ತಪಡಿಸಿದೆ.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಉದಯ್‌ಪುರ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮ ಗುಂಪಿನಿಂದ ಬಹಳ ಸಂವೇದನಾಶೀಲ ಸಂಗತಿ ಹೊರಬಂದಿದ್ದು, ಆರೋಪಿ ರಿಯಾಜ್ ಅಟ್ಟಾರಿ ಅವರೊಂದಿಗೆ ಬಿಜೆಪಿ ಸಂಪರ್ಕ ಹೊಂದಿದೆ ಎಂದು ತೋರಿಸುತ್ತದೆ ಎಂದು ಆರೋಪ ಮಾಡಿದ್ದಾರೆ.
ಕೆಲವು ವರದಿಗಳು ಆರೋಪಿಯನ್ನು ರಿಯಾಜ್ ಅಖ್ತರಿ ಎಂದೂ ಉಲ್ಲೇಖಿಸಿವೆ. ಕನ್ಹಯ್ಯಾ ಲಾಲ್ ಹತ್ಯೆಯ ಹಂತಕ ರಿಯಾಜ್ ಅಟ್ಟಾರಿ ಬಿಜೆಪಿಯ ಸದಸ್ಯ ಎಂದು ಖೇರಾ ಪತ್ರಿಕಾಗೋಷ್ಠಿಯ ನಂತರ ಟ್ವೀಟ್ ಮಾಡಿದ್ದಾರೆ. ಆರೋಪಿಯ ಬಿಜೆಪಿ ಸಂಪರ್ಕವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕರೊಬ್ಬರು ಮಾಡಿದ ಟ್ವೀಟ್‌ಗೆ ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಬಿಜೆಪಿಯ ಮಾಧ್ಯಮ ತಂತ್ರಜ್ಞಾನ ಮುಖ್ಯಸ್ಥ ಅಮಿತ್ ಮಾಳವಿಯಾ ಇದು ನಕಲಿ ಸುದ್ದಿ ಎಂದು ತಳ್ಳಿಹಾಕಿದ್ದರು.
ನೀವು #FakeNewsನ್ನು ಪ್ರಚಾರ ಮಾಡುತ್ತಿರುವುದು ನನಗೆ ಅಚ್ಚರಿಯಾಗುತ್ತಿಲ್ಲ. ಉದಯಪುರದ ಕೊಲೆಗಾರರು ಬಿಜೆಪಿಯ ಸದಸ್ಯರಲ್ಲ. ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯನ್ನು ಕೊಲ್ಲಲು ಎಲ್ ಟಿಟಿಇ ಹೇಗೆ ಕಾಂಗ್ರೆಸ್ ಸೇರಲು ಪ್ರಯತ್ನಪಟ್ಟಿತ್ತು ಅದೇ ರೀತಿ ಅವರು ಬಿಜೆಪಿ ಸೇರಲು ಪ್ರಯತ್ನಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮತ್ತೆ ಮತ್ತೆ ಮೂರ್ಖತನ ತೋರಿಸುವುದನ್ನು ನಿಲ್ಲಿಸಬೇಕು ಎಂದು ಕೂಡ ಮಾಳವಿಯಾ ಹೇಳಿದರು.
ಕಳೆದ ಮಂಗಳವಾರ ಮಧ್ಯಾಹ್ನ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ಚಾಕು ಹಿಡಿದುಕೊಂಡು ಅಂಗಡಿಯೊಳಗೆ ಪ್ರವೇಶಿಸಿ ಬಟ್ಟೆ ಹೊಲಿಸಲು ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಬಂದು ಕತ್ತು ಸೀಳಿ ಕೊಂದು ಹಾಕಿದ್ದರು. ಕೊಲೆಗೆ ಹೊಣೆಹೊತ್ತು ತಮ್ಮ ಕೃತ್ಯದ ಭಯಾನಕ ವಿಡಿಯೊವನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದರು.
ಇಬ್ಬರು ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.