ಉಡುಪಿ:ಜೂ 30. ಉಡುಪಿ ನಗರಸಭಾ ಅಧ್ಯಕ್ಷ್ಯರ ವಾರ್ಡಿನಲ್ಲಿಯೇ ಮಳೆಗಾಲದಲ್ಲಿ ಆರಂಭಿಸಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನತೆ ಸಂಕಷ್ಟ ಪಡುವಂತಾಗಿದೆ. ಉಡುಪಿ ನಗರಸಭೆಗೆ ಒಳಪಟ್ಟ ಸ್ವತಹ ನಗರಸಭಾ ಅಧ್ಯಕ್ಷರಾಗಿರುವ ಸುಮಿತ್ರಾ ನಾಯಕ್ ಇವರು ಪ್ರತಿನಿಧಿಸುವ ಪರ್ಕಳ ವಾರ್ಡಿನ ಬಿಎಸ್ಎನ್ಎಲ್ ಕಚೇರಿಯ ಟವರ್ ಪಕ್ಕದಿಂದ ಕೋಡಂಗೆ ಶ್ರೀ ರಾಮ ಭಜನಾ ಮಂದಿರದ ತನಕ ಅಂದಾಜು ಅರ್ಧ ಕಿಲೋಮೀಟರ್. ರಸ್ತೆಯ ಅಗಲೀಕರಣ ಕಾಮಗಾರಿಯು ಕಳೆದ ಒಂದುವರೆ ತಿಂಗಳಿನಿಂದ ನಿಧಾನಗತಿಯಲ್ಲಿ ಸಾಗುತಿದ್ದು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತಿದ್ದಾರೆ.
ನಗರೋತ್ಥಾನ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ ಅನುದಾನದಲ್ಲಿ ಈ ರಸ್ತೆಯನ್ನು ಅಗಲೀಕರಣಗೊಳಿಸಲು ನಿರ್ಧರಿಸಲಾಗಿತ್ತು. ಪ್ರಸ್ತುತ 5 1/2 ಮೀಟರ್ ಅಗಲ ಿರುವ ರಸ್ತೆಯನ್ನು 7 1/2 ಮೀಟರ್ನಷ್ಟು ಅಗಲೀಕರಣಗೊಳಿಸಲು ಯೋಜನೆ ಕೂಡಾ ಸಿದ್ದಪಡಿಸಲಾಗಿತ್ತು. ಮಳೆಗಾಲ ಪ್ರಾರಂಭವಾಗುವ ಮುನ್ನ ಕಾಮಗಾರಿ ಆರಂಭಿಸಿ ಮುಗಿಸಬೇಕಿದ್ದ ಇಲಾಖೆ ಮತ್ತು ಗುತ್ತಿಗೆದಾರರು, ಮಳೆಗಾಲ ಆರಂಭವಾಗುವ ಕೆಲವೇ ದಿನಗಳ ಮುನ್ನ ಕಾಮಗಾರಿ ಆರಂಭಿಸಿದ್ದಾರೆ. ಇದೀಗ ಉಡುಪಿಯಲ್ಲಿ ಮಳೆ ಪ್ರಮಾಣ ಕೂಡಾ ತೀವ್ರವಾಗುತಿದ್ದು ಇದರ ನಡುವೆ ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆ ಕೆಸರು ಗದ್ದೆಯಂತಾಗಿದೆ.
ಕಾಮಗಾರಿಗೆ ಚಾಲನೆ ಕೊಟ್ಟು ಕಾಲಹರಣ ಮಾಡಿ ಒಂದೂವರೆ ತಿಂಗಳು ಕಳೆದಿದೆ.ಈಗ.ರಸ್ತೆಯ ಪಕ್ಕದ ವಿದ್ಯುತ್ ಕಂಬಗಳನ್ನು ಸ್ವಲ್ಪ ಪ್ರಮಾಣದಲ್ಲಿ ಅಲ್ಲಿಯೇ ಕಾಟಚಾರಕ್ಕೆ ವರ್ಗಾವಣೆ ಮಾಡಿ ಮತ್ತೆ ಅಳತೆ ಮಾಡಲು ಶುರು ಮಾಡಿದ್ದಾರೆ. ಈಗಾಗಲೇ ಹಳೆ ರಸ್ತೆಯನ್ನು ಸಂಪೂರ್ಣವಾಗಿ ಜೆಸಿಬಿ ತೆಗೆದು. ಕೆಸರು ಮಣ್ಣನು ತುಂಬಿಸಿ ಸಾರ್ವಜನಿಕರಿಗೆ ನಡೆದಾಡಲು ಕೂಡಾ ಸಂಕಷ್ಟ ಪಡುವಂತಾಗಿದೆ. ಇದೀಗ ಮಳೆ ತೀವ್ರವಾದ ಹಿನ್ನಲೆಯಲ್ಲಿ ಆಗಸ್ಟ್ ತಿಂಗಳಿನಿಂದ ಕಾಮಗಾರಿ ಮುಂದುವರೆಯುವ ಬಗ್ಗೆ ಮೂಲಗಳಿಂದ ಮಾಹಿತಿ ಬಂದಿದ್ದು ಅಲ್ಲಿಯವರೆಗೆ ಸಾರ್ವಜನಿಕರು ಕೆಸರು ಗದ್ದೆಯಲ್ಲಿಯೇ ಓಡಾಡಬೇಕಾಗಿದೆ. ಈ ಕಾಮಗಾರಿಯನ್ನು ಮಳೆಗಾಲದಲ್ಲಿ ಆರಂಭಿಸಲು ಅನುಮತಿ ನೀಡುವ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.