ಸುಬ್ರಹ್ಮಣ್ಯ: ಜೂ 30. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ದೇವಲದಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದರು.
ಮಧ್ಯಾಹ್ನ ವೇಳೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ಹಾಗೂ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಅವರು ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಈ ಸಾಂದರ್ಭ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಗವಾನ್ ಋಷಿಕೇಶಿ ಸೋಣವಾಣೆ, ಪುತ್ತೂರು ಎಸಿ ಗಿರೀಶ್ ನಂದನ್, ಕಡಬ ಇಒ ನವೀನ್ ಭಂಡಾರಿ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯಪಾಲರು ರಾತ್ರಿ ದೇವಸ್ಥಾನದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿ ಜುಲೈ 1ರ ಬೆಳಿಗ್ಗೆ 6 ಗಂಟೆಗೆ ಕುಕ್ಕೆ ಸುಬ್ರಮಣ್ಯದಲ್ಲಿ ದೇವರ ದರ್ಶನ ಪಡೆದು, 7 ಗಂಟೆಗೆ ಅತಿಥಿ ಗೃಹಕ್ಕೆ ಆಗಮಿಸಿ ಬಳಿಕ 9.30ಕ್ಕೆ ಮಡಿಕೇರಿಗೆ ತೆರಳಲಿರುವರು.