ಮಣಿಪುರ: ಸೇನಾ ಕ್ಯಾಂಪ್‌ನ ಬಳಿ ಸಂಭವಿಸಿದ ಭೂಕುಸಿತದಲ್ಲಿ 7 ಮಂದಿ ಸಾವು, 45ಕ್ಕೂ ಹೆಚ್ಚು ಮಂದಿ ನಾಪತ್ತೆ!
ನವದೆಹಲಿ: ಮಣಿಪುರದ ನೋನಿ ಜಿಲ್ಲೆಯ ತುಪುಲ್ ರೈಲು ನಿಲ್ದಾಣದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಭೀಕರ ಭೂಕುಸಿತದಲ್ಲಿ 7 ಮಂದಿ ಸಾವನ್ನಪ್ಪಿದ್ದು ನಂತರ ಕನಿಷ್ಠ 45 ಭಾರತೀಯ ಸೇನಾ ಸಿಬ್ಬಂದಿ ಮತ್ತು ಹಲವು ಜನರು ನಾಪತ್ತೆಯಾಗಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಅವಶೇಷಗಳಲ್ಲಿ ಸಿಲುಕಿರುವುದರಿಂದ ಮುಂದೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಜಿರಿಬಾಮ್‌ನಿಂದ ರಾಜಧಾನಿ ಇಂಫಾಲ್‌ಗೆ ರೈಲು ಮಾರ್ಗ ನಿರ್ಮಾಣ ಹಿನ್ನಲೆ ಪ್ರಾದೇಶಿಕ ಸೇನಾ ಶಿಬಿರ ಅಲ್ಲಿ ರಕ್ಷಣೆಗೆ ನಿಂತಿತ್ತು.
ಪ್ರಸ್ತುತ ಹದಿಮೂರು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ನೋನಿ ಜಿಲ್ಲೆಯ ಎಸ್‌ಡಿಒ ಸೊಲೊಮನ್ ಎಲ್ ಫಿಮೇಟ್ ಹೇಳುತ್ತಾರೆ.
ಘಟನೆ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಸಿಎಂ ಬಿರೇನ್ ಸಿಂಗ್, ತುಪುಲ್‌ನಲ್ಲಿ ಇಂದು ಸಂಭವಿಸಿದ ಭೂಕುಸಿತದ ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಸಭೆಯನ್ನು ಕರೆಯಲಾಗಿದೆ. ಈಗಾಗಲೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ವೈದ್ಯರೊಂದಿಗೆ ಆಂಬ್ಯುಲೆನ್ಸ್‌ಗಳನ್ನು ಸಹ ಕಳುಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮಣಿಪುರದ ತುಪುಲ್ ರೈಲು ನಿಲ್ದಾಣದ ಬಳಿ ಭೂಕುಸಿತದ ಹಿನ್ನೆಲೆಯಲ್ಲಿ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಎನ್‌ಡಿಆರ್‌ಎಫ್ ತಂಡ ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಇನ್ನೂ 2 ತಂಡಗಳು ತುಪುಲ್‌ಗೆ ತೆರಳುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಇನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಾವಿಗೆ ಸಂತಾಪ ಸೂಚಿಸಿದ್ದು ದುಃಖತಪ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಜಿರಿಬಾಮ್‌ನಿಂದ ಇಂಫಾಲ್‌ವರೆಗೆ ನಿರ್ಮಾಣ ಹಂತದಲ್ಲಿರುವ ರೈಲು ಮಾರ್ಗದ ರಕ್ಷಣೆಗಾಗಿ ತುಪುಲ್ ರೈಲು ನಿಲ್ದಾಣದ ಬಳಿ ನಿಯೋಜಿಸಲಾದ 107 ಟೆರಿಟೋರಿಯಲ್ ಆರ್ಮಿ ಕ್ಯಾಂಪ್ ಸ್ಥಳದಲ್ಲಿ ಭೂಕುಸಿತ ಸಂಭವಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.