Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಬ್ಯಾಂಕ್ ಮ್ಯಾನೇಜರ್ ಡೇಟಿಂಗ್‌ ಲೀಲೆ : ಎಂಟು ಮಹಿಳೆಯರ ನಂಟಿಗೆ 5.70 ಕೋಟಿ ಹಣ

ಬೆಂಗಳೂರು: ಜೂ 29. ಠೇವಣಿದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 5.70 ಕೋಟಿ ರೂ.ಗಳನ್ನು ಸಾಲ ಪಡೆದು ಡೇಟಿಂಗ್‌ ಆಪ್‌ನಲ್ಲಿ ಪರಿಚಯವಾದ ಯುವತಿಗೆ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಹನುಮಂತನಗರದ ಇಂಡಿಯನ್​ ಬ್ಯಾಂಕ್​ ವ್ಯವಸ್ಥಾಪಕ, ಕೇರಳ ಮೂಲದ ಎಸ್. ಹರಿಶಂಕರ್​ ವಿಚಾರಣೆ ವೇಳೆ ಸ್ಪೋಟಕ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ. ಈತ ಒಂದಲ್ಲ, ಬರೋಬ್ಬರಿ ಎಂಟು ಯುವತಿಯರಿಗೆ ಈ ಹಣವನ್ನು ಹಂಚಿದ್ದಾನೆ.

ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳ ಮೋಹಕ ಮಾತುಗಳಿಗೆ ಮರುಳಾಗಿ ಆಕೆ ಕೇಳಿದಾಗೆಲ್ಲ ಹಣ ನೀಡಿದ್ದೆ ಎಂಬುದಾಗಿ ಆರೋಪಿ ಮೊದಲು ಬಾಯ್ಬಿಟ್ಟಿದ್ದ. ಆದರೆ ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸಿದಾಗ ಆತ ಒಬ್ಬಳೇ ಯುವತಿಯಲ್ಲ, ಎಂಟು ಯುವತಿಯರಿಗೆ ಈ ಕೋಟ್ಯಾಂತರ ರೂಪಾಯಿ ಹಣವನ್ನು ಹಂಚಿದ್ದೇನೆ ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಈತನ ಪತ್ನಿ ಬಾಣಂತನಕ್ಕೆಂದು ತವರಿಗೆ ಹೋಗಿದ್ದು, ಈ ಸಂದರ್ಭ ನೋಡಿಕೊಂಡು ಈತ ಡೇಟಿಂಗ್ ಆಪ್‌ನಲ್ಲಿ ಯುವತಿಯರ ಹಿಂದೆ ಬಿದ್ದಿದ್ದ. ಈ ಯುವತಿಯರಿಗೆ ಹಣ ನೀಡುವ ಸಲುವಾಗಿ ಆತ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಅನಿತಾ ಎಂಬ ಗ್ರಾಹಕರೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅವರ 1.32 ಕೋಟಿ ರೂ. ಠೇವಣಿ ಆಧಾರದ ಮೇಲೆ 5.70 ಕೋಟಿ ರೂ. ಓವರ್​ ಡ್ರಾಫ್ಟ್ ಖಾತೆಗಳನ್ನು ತೆರೆದು ವರ್ಗಾವಣೆ ಮಾಡಿಕೊಂಡಿದ್ದ.

ಬಳಿಕ ಅದನ್ನು ಕೇವಲ ಆರು ದಿನಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದ 28 ಬ್ಯಾಂಕ್​ ಖಾತೆಗಳಿಗೆ ಮತ್ತು ರಾಜ್ಯದ 2 ಖಾತೆಗಳಿಗೆ 136 ಬಾರಿ ವರ್ಗಾವಣೆ ಮಾಡಿದ್ದಾರೆ. ಇದು ಮೇಲಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹರಿಶಂಕರ್‌ನನ್ನು ಪ್ರಶ್ನೆ ಮಾಡಿದಾಗ ಅಚಾತುರ್ಯ ಎಸಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು.

ಇದೀಗ ತಪ್ಪಿನ ಅರಿವಾಗಿರುವ ಹರಿಶಂಕರ್‌, ತಪ್ಪು ಮಾಡಿದ್ದೇನೆ, ದಯವಿಟ್ಟು ಪತ್ನಿಗೆ ಹೇಳಬೇಡಿ ಎಂದು ಪೊಲೀಸರೆದುರು ಅವಲತ್ತುಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಹರಿಶಂಕರ್‌ನ ಈ ಕೃತ್ಯಕ್ಕೆ ಬ್ಯಾಂಕ್ ಸಿಬಂದಿಗಳಾದ ಕೌಶಲ್ಯಾ ಮತ್ತು ಮುನಿರಾಜು ನೆರವಾಗಿದ್ದರು ಎನ್ನಲಾಗಿದೆ.

No Comments

Leave A Comment