BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ

ದಿಸ್ಪುರ್: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮಹಾಮಳೆಗೆ ಮೃತಪಟ್ಟವರ ಸಂಖ್ಯೆ 108ಕ್ಕೆ ತಲುಪಿದ್ದು, ಭೂಕುಸಿತದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

‘ಬರಾಕ್ ಕಣಿವೆಗೆ ಗೇಟ್‌ವೇ’ ಎಂದು ಪರಿಗಣಿಸಲಾದ ಸಿಲ್ಚಾರ್‌ನಲ್ಲಿನ ಪರಿಸ್ಥಿತಿಯು ಅತ್ಯಂತ ಆತಂಕಕಾರಿಯಾಗಿದೆ. ಸಿಲ್ಚಾರ್‌ನ ಹೆಚ್ಚಿನ ಪ್ರದೇಶಗಳು ಇನ್ನೂ ನೀರಿನಲ್ಲಿ ಮುಳುಗಿವೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಯಾಚಾರ್ ಮತ್ತು ಬರ್ಪೇಟಾದಿಂದ ತಲಾ ಎರಡು ಮತ್ತು ಧುಬ್ರಿ ಮತ್ತು ಹೊಸದಾಗಿ ರಚಿಸಲಾದ ಬಜಾಲಿ ಮತ್ತು ತಮುಲ್ಪುರ್ ಜಿಲ್ಲೆಗಳಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು 4,536 ಗ್ರಾಮಗಳು ಇನ್ನೂ ಪ್ರವಾಹದ ನೀರಿನಲ್ಲಿ ತತ್ತರಿಸಿವೆ.

ಬಾರ್ಪೇಟಾ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 10.32 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಇನ್ನು 5.03 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

ಎಲ್ಲಾ ಪ್ರವಾಹ 30 ಪೀಡಿತ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತಗಳು ಸ್ಥಾಪಿಸಿರುವ 759 ಪರಿಹಾರ ಶಿಬಿರಗಳಲ್ಲಿ ಒಟ್ಟು 2.84 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಧುಬ್ರಿ, ಶಿವಸಾಗರ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಬ್ರಹ್ಮಪುತ್ರ, ದಿಸಾಂಗ್ ಮತ್ತು ಕೊಪಿಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಅಸ್ಸಾಂನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರವು ನಿರಂತರವಾಗಿ ಗಮನಿಸುತ್ತಿದೆ ಮತ್ತು ಸವಾಲನ್ನು ಎದುರಿಸಲು ಎಲ್ಲಾ ನೆರವು ನೀಡಲು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿವೆ. ಅವರು ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ ಮತ್ತು ತೊಂದರೆಗೊಳಗಾದವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

No Comments

Leave A Comment