ಶೇಂದಿ ತೆಗೆಯಲು ತೆಂಗಿನ ಮರ ಹತ್ತಿದ್ದಾಗ ಕೆಳಕ್ಕೆ ಬಿದ್ದು ವ್ಯಕ್ತಿ ಮೃತ್ಯು
ಕಾಪು : ಉಡುಪಿ ಜಿಲ್ಲೆಯ ಕಾಪು ಸಮೀಪ ಶೇಂದಿ ತೆಗೆಯಲು ಮರ ಹತ್ತಿದ್ದಾಗ ತೆಂಗಿನ ಮರದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಸಾವನ್ನಪ್ಪಿದ ವ್ಯಕ್ತಿ ಉಳಿಯಾರಗೋಳಿ ಗ್ರಾಮದ ತಾಳಿ ತೊಟ ನಿವಾಸಿ ವಿನೋದರ ಎ. ಸನಿಲ್ (55) ಎಂದು ಗುರುತಿಸಲಾಗಿದೆ.
ಸಾಂಪ್ರಧಾಯಿಕ ಶೈಲಿಯ ಶೇಂದಿ ತೆಗೆಯುವ ಕೆಲಸ ಮಾಡುತ್ತಿದ್ದ ವಿನೋಧರ ಸನಿಲ್ ಅವರು ಜೂ. 4 ರಂದು ತೆಂಗಿನ ಮರದಿಂದ ಶೇಂದಿ ತೆಗೆಯಲು ತೆಂಗಿನ ಮರಕ್ಕೆ ಹತ್ತಿದ್ದು, ತೆಂಗಿನ ಕೊಂಬನ್ನು ಕತ್ತಿಯಿಂದ ತುಂಡು ಮಾಡುವಾಗ ಆಕಸ್ಮಿಕವಾಗಿ ಅವರ ಎಡಕೈ ಮಣಿಗಂಟಿಗೆ ತಾಗಿ ರಕ್ತ ಗಾಯವಾಗಿ ಮರದಿಂದ ಕೆಳಗೆ ಬಿದ್ದಿದ್ದರು. ಅವರ ಮಗ ಮತ್ತು ಇತರರು ಸೇರಿಕೊಂಡು ಅವರನ್ನು ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಕೈಗೆ ಜೂ. 11ರಂದು ಶಸ್ತ್ರ ಚಿಕಿತ್ಸೆ ನಡೆಸಿದ್ದು ನಂತರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಜೂ. 18ರಂದು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ವೈದ್ಯರಿಂದ ತಿಳಿದು ಬಂದಿದೆ.