Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಮಹಾರಾಷ್ಟ್ರ: ಏಕನಾಥ್ ಶಿಂಧೆಗೆ ಬೆಂಬಲ ವ್ಯಕ್ತಪಡಿಸಿ ಪತ್ರಕ್ಕೆ ಶಿವಸೇನೆ ಶಾಸಕರ ಸಹಿ; ವಿಶ್ವಾಸಮತ ಯಾಚನೆಗೆ ಸಿದ್ಧತೆ!

ಮುಂಬೈ: ಏಳು ಮಂದಿ ಸ್ವತಂತ್ರ ಶಾಸಕರು ಹಾಗೂ 33 ಶಿವಸೇನೆ ಶಾಸಕರು ಸೇರಿದಂತೆ ಮಹಾರಾಷ್ಟ್ರದ 40 ಶಾಸಕರು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆಯವರಿಗೆ ಬೆಂಬಲ ವ್ಯಕ್ತಪಡಿಸಿ ಪತ್ರಕ್ಕೆ ಸಹಿ ಹಾಕಿದ್ದು, ರಾಜ್ಯಪಾಲರ ಭೇಟಿಯಾಗಿ ವಿಶ್ವಾಸಮತ ಯಾಚನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಅನುಮತಿ ನೀಡುವಂತೆ ಬಂಡಾಯ ಶಾಸಕರು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ ಪತ್ರ ಬರೆಯಲಿದ್ದಾರೆಂದು ಮೂಲಗಳು ತಿಳಿಸಿವೆ.

ಶಿಂಧೆ ನೇತೃತ್ವದ 40 ಶಾಸಕರು ಬುಧವಾರ ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಶಿಂಧೆ ಮತ್ತು ಇತರೆ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಇಂದು ಬೆಳಿಗ್ಗೆ ಗುವಾಹಟಿಗೆ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆಯವರು, 40 ಶಾಸಕರು ನನ್ನೊಂದಿಗೆ ಇದ್ದಾರೆ. ಇನ್ನೂ 10 ಶಾಸಕರು ಶೀಘ್ರದಲ್ಲೇ ನಮ್ಮನ್ನು ಸೇರಿಕೊಳ್ಳಲಿದ್ದಾರೆ. ನಾನು ಯಾರನ್ನೂ ಟೀಕಿಸುತ್ತಿಲ್ಲ. ದಿವಂಗತ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಸೇನಾವನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆಂದು ಹೇಳಿದರು.

ನಾವೆಲ್ಲ ಬಾಳಾಸಾಹೇಬ್ ಠಾಕ್ರೆ ಅನುಯಾಯಿಗಳು. ನಾವು ಶಿವಸೇನಾ ತೊರೆದಿಲ್ಲ ಹಾಗೂ ಆ ಬಗ್ಗೆ ಯೋಚಿಸಿಯೂ ಇಲ್ಲ. ಹಿಂದೂ ಎಂದು ಗರ್ವದಿಂದ ಹೇಳಿ ಎಂಬ ಬಾಳಾಸಾಹೇಬ್ ಠಾಕ್ರೆ ಹೇಳಿಕೆಯನ್ನು ನಾನು ನೆನಪಿಸಿಕೊಳ್ಳುತ್ತೇನೆಂದು ತಿಳಿಸಿದ್ದರು.

No Comments

Leave A Comment