Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ....

ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ: ಕನಿಷ್ಠ 255 ಮಂದಿ ಸಾವು, 500 ಮಂದಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ ಭಯಾನಕ ಭೂಕಂಪನದಲ್ಲಿ ಕನಿಷ್ಠ 250ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದೇಶದ ಪೂರ್ವ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ಟಿಕಾ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ. ಈ ಭಾಗದಲ್ಲಿ ಕನಿಷ್ಠ 250 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ತಾಲಿಬಾನ್ ಆಡಳಿತದಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಸೀಮ್ ಹಕ್ಕಾನಿ ತಿಳಿಸಿದ್ದಾರೆ. ಸಾವಿನ ಸಂಖ್ಯೆ 250ಕ್ಕೂ ಹೆಚ್ಚಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಬಿಬಿಸಿ ವರದಿ ಮಾಡಿದೆ.

ಪೂರ್ವದ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್‌ಗಳಲ್ಲಿ ಕೂಡ ಅಪಾರ ಪ್ರಮಾಣದ ಸಾವು ನೋವುಗಳು ವರದಿಯಾಗಿವೆ. ಆಗ್ನೇಯ ಭಾಗದ ನಗರ ಖೋಸ್ಟ್‌ನಿಂದ ಸುಮಾರು 44 ಕಿಮೀ ದೂರದಲ್ಲಿ ಹಾಗೂ 51 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದೆ. ಖೋಸ್ಟ್‌ನಲ್ಲಿ ಕನಿಷ್ಠ 25 ಮಂದಿ ಬಲಿಯಾಗಿದ್ದಾರೆ. ನಂಗರ್ಹಾರ್ ಪ್ರಾಂತ್ಯದಲ್ಲಿ ಕೂಡ ಐವರು ಮೃತಪಟ್ಟಿರುವುದು ವರದಿಯಾಗಿದೆ. ಅಪಾರ ಪ್ರಮಾಣದ ಕಟ್ಟಡಗಳು ಧರೆಗುರುಳಿವೆ.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಭಾಗಗಳವರೆಗೆ ಸುಮಾರು 500 ಕಿಮೀ ಉದ್ದಕ್ಕೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗಳಲ್ಲಿ ಕೂಡ ಭೂಮಿ ನಡುಗಿದ ಅನುಭವವಾಗಿದೆ. ಪಾಕಿಸ್ತಾನದಲ್ಲಿ ಕೂಡ ತೀವ್ರತೆ ಜೋರಾಗಿತ್ತು. ಆದರೆ ಇದುವರೆಗೂ ಸಾವು- ನೋವು ಸಂಭವಿಸಿರುವುದು ವರದಿಯಾಗಿಲ್ಲ.

No Comments

Leave A Comment