BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ರಾಷ್ಟ್ರಪತಿ ಚುನಾವಣೆ: ‘ಮಮತಾ’ ನೇತೃತ್ವದಲ್ಲಿ ಇಂದು ಅಪರಾಹ್ನ ಸಭೆ; ಹೆಚ್ ಡಿಡಿ, ಹೆಚ್ ಡಿಕೆ ಭಾಗಿ

ನವದೆಹಲಿ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣಾ (Presidential poll) ಕಣ ರಂಗೇರುತ್ತಿದೆ. ರಾಮನಾಥ್ ಕೋವಿಂದ್ (Ramanath Kovind) ಅವರ ಅಧಿಕಾರವಧಿ ಜುಲೈ 24ಕ್ಕೆ ಮುಗಿಯುತ್ತಿದ್ದು ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಕುತೂಹಲ ಮನೆಮಾಡಿದೆ.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳಿಂದ ಯಾವ ಅಭ್ಯರ್ಥಿಯನ್ನು ರಾಷ್ಟ್ರಪತಿ ಕಣಕ್ಕೆ ನಿಲ್ಲಿಸುತ್ತಾರೆ, ಪ್ರಾದೇಶಿಕ ಪಕ್ಷಗಳೆಲ್ಲ ಒಂದಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆಯೇ ಎಂಬ ಚರ್ಚೆ ದಟ್ಟವಾಗಿದೆ. ಇಂದು ಅಪರಾಹ್ನ 3 ಗಂಟೆಗೆ ದೆಹಲಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರ ಸಭೆ ನಡೆಯಲಿದ್ದು 22 ವಿರೋಧ ಪಕ್ಷಗಳನ್ನು ಅವರು ಸಭೆಗೆ ಕರೆದಿದ್ದಾರೆ.ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಸಭೆ ನಡೆಯಲಿದ್ದು, ಎಲ್ಲರ ಚಿತ್ತ ದೆಹಲಿಯತ್ತ ಮನೆಮಾಡಿದೆ.

ಸಭೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ನ ನಾಯಕರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ದೆಹಲಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ತೆರಳಿದ್ದಾರೆ.

ಸಹಮತದ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮನವೊಲಿಸಲು ಮಮತಾ ಬ್ಯಾನರ್ಜಿಯವರು ಈಗಾಗಲೇ ಎನ್ ಸಿಪಿ ನಾಯಕ ಶರದ್ ಪವಾರ್(Sharad Pawar) ಅವರನ್ನು ನಿನ್ನೆ ಭೇಟಿ ಮಾಡಿದ್ದರು. ಬಲಿಷ್ಠ ಮರಾಠ ರಾಜಕೀಯ ಮುಖಂಡನಾಗಿರುವ ಶರದ್ ಪವಾರ್ ಅವರಿಗೆ ಹಲವು ರಾಜಕೀಯ ಪಕ್ಷಗಳ ನಾಯಕರ ಜೊತೆ ನಿಕಟ ಸಂಪರ್ಕವಿದೆ. ಆದರೆ ಅವರು ಮಮತಾ ಬ್ಯಾನರ್ಜಿಯವರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಕಾಂಗ್ರೆಸ್, ಎಡಪಕ್ಷಗಳು ಕೂಡ ಮಮತಾ ಸಭೆಗೆ ಗೈರಾಗಲಿದ್ದಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರು ಉನ್ನತ ನಾಯಕತ್ವ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ. ಸಭೆಯಲ್ಲಿ ಸಿಪಿಐ(ಎಂ) ಪಕ್ಷವನ್ನು ನಾಯಕ ಇ ಕರೀಂ ಪ್ರತಿನಿಧಿಸಲಿದ್ದಾರೆ.

ತಮ್ಮ ಪಕ್ಷದ ಸಂಸದರನ್ನು ಸಭೆಗೆ ಕರೆಯುವ ಮೊದಲು, ಯೆಚೂರಿ ಅವರು ಬ್ಯಾನರ್ಜಿಗೆ ಪತ್ರ ಬರೆದು ಸಭೆಯನ್ನು ಆಯೋಜಿಸುವ ನಿರ್ಧಾರವನ್ನು ಇದು ತಮ್ಮ ಏಕಪಕ್ಷೀಯ ನಿರ್ಧಾರ ಎಂದು ಕರೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಭೆಗೆ ಡಿಎಂಕೆಯ ಟಿಆರ್ ಬಾಲು, ಶಿವಸೇನೆಯ ಸುಭಾಷ್ ದೇಸಾಯಿ, ಆರ್‌ಎಲ್‌ಡಿಯ ಜಯಂತ್ ಚೌಧರಿ ಮತ್ತು ಮೆಹಬೂಬಾ ಮುಫ್ತಿ ಅವರು ಭಾಗವಹಿಸಲಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗವಹಿಸಲಿದ್ದಾರೆ.

ಕಳೆದ ವರ್ಷದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬೃಹತ್ ವಿಜಯ ಸಾಧಿಸಿದ ನಂತರ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿ ಮುನ್ನಲೆಗೆ ಬರಲು ಮಮತಾ ಬ್ಯಾನರ್ಜಿ ತೀವ್ರ ಉತ್ಸುಕವಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಪ್ರಬಲ ವಿರೋಧ ಪಕ್ಷ ತಯಾರು ಮಾಡಬೇಕೆಂಬುದು ಅವರ ಉದ್ದೇಶವಾಗಿದ್ದು ಇದಕ್ಕೆ ಪ್ರಾದೇಶಿಕ ಪಕ್ಷಗಳು ಒಗ್ಗೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಗೆ ಸಹ ಆಹ್ವಾನ ನೀಡಿದ್ದು ಈ ಹಿಂದೆ ಸುದ್ದಿಯಾಗಿತ್ತು.

No Comments

Leave A Comment