ಚಲಿಸುತ್ತಿದ್ದ ಬಸ್‌ನೊಳಗೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ-ನಾಲ್ವರ ಬಂಧನ
ಪಾಟ್ನಾ:ಜೂ 08 . ಚಲಿಸುತ್ತಿದ್ದ ಬಸ್‌ನಲ್ಲಿಯೇ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ಬಿಹಾರದಲ್ಲಿ ಮಂಗಳವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯು ಪಶ್ಚಿಮ ಚಂಪಾರಣ್‌ನಲ್ಲಿರುವ ಬೆತಿಯಾಗೆ ಪ್ರಯಾಣಿಸಲು ಚಂಪಾರಣ್ ಜಿಲ್ಲೆಯ ಮೋತಿಹಾರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ ಬೆತಿಯಾಗೆ ಹೋಗುವುದಾಗಿ ಹೇಳಿ ಚಾಲಕ ಬಾಲಕಿಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದ. ಬಳಿಕ ಬಸ್ ಸಂಚರಿಸುತ್ತಿದ್ದಾಗ ಬಾಲಕಿಗೆ ಪಾನೀಯ ನೀಡಿ ಪ್ರಜ್ಞೆ ತಪ್ಪಿಸಿದ ಆರೋಪಿಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್ಚರಗೊಂಡಾಗ ಬಸ್‌ನ ಬಾಗಿಲು, ಕಿಟಕಿಗಳನ್ನು ಮುಚ್ಚಲಾಗಿತ್ತು. ಬಸ್‌ನೊಳಗಡೆ ನಾನು ಬಾಕಿಯಾಗಿದ್ದೆ. ಆದರೆ, ಉಳಿದವರು ಬಸ್‌ನಿಂದ ಪರಾರಿಯಾಗಿದ್ದರು. ಬಳಿಕ ನಾನು ಕಿರುಚಾಡುವುದನ್ನು ಕೇಳಿದ ದಾರಿಹೋಕರು ಬಸ್‌ನ ಬಾಗಿಲು ತೆಗೆದು ನನ್ನನ್ನು ರಕ್ಷಿಸಿದರು ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಬಾಲಕಿ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಬಸ್ ಚಾಲಕ, ನಿರ್ವಾಹಕ, ಸಹಾಯಕ ಸೇರಿ ನಾಲ್ವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಬಸ್‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.