ಆಂಧ್ರ ಪ್ರದೇಶ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆಯ ಗೋಡೆ ಕುಸಿತ; ನಾಲ್ವರ ಸಾವು, ಇಬ್ಬರಿಗೆ ಗಾಯ
ಅಮರಾವತಿ: ಅಡುಗೆ ಮನೆಯಲ್ಲಿದ್ದ ಎಲ್’ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿ, ಇಬ್ಬರಿಗೆ ಗಾಯವಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮುಲಕಲೇಡು ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಜೈನುಬೀ (60), ದಾದು (36), ಶರ್ಫುನ್ನಿ (28), ಮೂರು ವರ್ಷದ ಮಗು ಫಿರ್ದೋಜ್ ಎಂದು ಗುರ್ತಿಸಲಾಗಿದೆ. ದುರ್ಘಟನೆ ಸಂಭವಿಸುವ ಸಂದರ್ಭದಲ್ಲಿ ಮನೆಯಲ್ಲಿದ್ದ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಇಂದು ಬೆಳಗಿನ ಜಾವ 4.10ರ ಸುಮಾರಿಗೆ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದಿಂದ ಮನೆಯ ಗೋಡೆ ಕುಸಿದು ಬಿದ್ದಿದೆ. ಘಟನೆ ವೇಳೆ ಮನೆಯಲ್ಲಿದ್ದವರು ನಿದ್ರೆಯಲ್ಲಿದ್ದರು ಎಂದು ಶೆಟ್ಟೂರ್ ಪೊಲೀಸ್ ಉಪನಿರೀಕ್ಷಕ ಜಿ.ಶಿವ ಅವರು ಹೇಳಿದ್ದಾರೆ.
ಮನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಅಕ್ಕಪಕ್ಕದ ಮನೆಗಳಿಗೂ ಹಾನಿಗಳಾಗಿದ್ದು, ಆ ಮನೆಗಳಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಸ್ಫೋಟ ಸಂಭವಿಸಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ರಕ್ಷಣೆಗೆ ಧಾವಿಸಿದ್ದಾರೆ. ಆದರೆ, ಗೋಡೆ ಕುಸಿತಗೊಂಡ ಪರಿಣಾಮ ನಾಲ್ವರು ಅವಶೇಷಗಳಡಿ ಮೃತಪಟ್ಟಿರುವುದು ತಿಳಿದುಬಂದಿದೆ. ಬಳಿಕ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ಆರಂಭಿಸಿದ್ದಾರೆ.