ಬೆಂಗಳೂರು: ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ
ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಆದಾಯ ತೆರಿಗೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಉದ್ಯಮಿ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರಿನ ವಸಂತ ನಗರದಲ್ಲಿರುವ ಬಾಬು ನಿವಾಸದಲ್ಲಿ ಬೀಡು ಬಿಟ್ಟಿರುವ ಐಟಿ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಅತ್ತ ಕೆಜಿಎಫ್ ಬಾಬುಗೆ ಸೇರಿದ ಕಚೇರಿಗಳಲ್ಲೂ ಪರಿಶೀಲನೆ ನಡೆಯುತ್ತಿದೆ.
ಬೆಳಗ್ಗೆಯೇ 6 ಕಾರುಗಳಲ್ಲಿ 3 ತಂಡವಾಗಿ ಬಂದಿರುವ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಉದ್ಯಮಿ ಕೆಜಿಎಫ್ ಬಾಬು ನಿವಾಸ ಹಾಗೂ ಕಚೇರಿಗಳಲ್ಲಿ ದಾಳಿ ನಡೆಸಿದ್ದಾರೆ. ಪೊಲೀಸ್ ಹಾಗೂ ಸಿಆರ್ಪಿಎಫ್ ಭದ್ರತಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಬಾಬು ಅವರ ಆದಾಯ, ವ್ಯವಹಾರಕ್ಕೆ ಸಂಬಂಧಿಸಿದಂತೆ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಆದಾಯ ತೆರಿಗೆಯಲ್ಲಿ ವ್ಯತ್ಯಯ ಶಂಕೆ ಹಿನ್ನಲೆಯಲ್ಲಿ ಐಟಿ ದಾಳಿ ನಡೆದಿದೆ.
ಕೆಜಿಎಫ್ ಬಾಬು ಬಳಿ ಘೋಷಿತ ಆಸ್ತಿಯೇ 1,741 ಕೋಟಿ ಇದೆ. ನಾಮಪತ್ರ ಸಲ್ಲಿಕೆ ವೇಳೆ 1,741 ಕೋಟಿ ಆಸ್ತಿ ವಿವರ ಘೋಷಿಸಿದ್ದರು. ಆದಾಯ ತೆರಿಗೆಯಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆ ಐಟಿ ನಡೆಸಿದೆ. ಕೆಜಿಎಫ್ ಬಾಬು ಹಾಗೂ ಸ್ನೇಹಿತರ ನಿವಾಸ, ಕಚೇರಿಗಳು ಸೇರಿ ಒಟ್ಟು 7 ಕಡೆ ಇಂದು ದಾಳಿ ನಡೆದಿದೆ. ಕೆಜಿಎಫ್ ಬಾಬು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.