BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಪುರಾಣದ ಜ್ಞಾನ ಸಂಪನ್ನತೆಗೆ ಯಕ್ಷಗಾನದ ಕೊಡುಗೆ ಅಪಾರ – ಕಲ್ಕೂರ

ಜನ ಸಾಮಾನ್ಯರಲ್ಲೂ ಪುರಾಣ ಕಥನಗಳ ಜ್ಞಾನ ಸಂಪನ್ನಗೊಳ್ಳುವಲ್ಲಿ ಯಕ್ಷಗಾನ ಕಲೆಯ ಪಾತ್ರ ಬಹಳ ಮಹತ್ತರವಾದುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.

ದೊಡ್ಡಾಟ, ಸಣ್ಣಾಟ ಸಹಿತ ಯಕ್ಷಗಾನದ ವಿವಿಧ ಪ್ರಕಾರಗಳಿದ್ದರೂ ಕಾಸರಗೋಡು ಸೇರಿದಂತೆ ಅವಿಭಜಿತ ಜಿಲ್ಲೆಗಳಲ್ಲಿ ಶೀಮಂತ ಕಲೆಯಾಗಿ ಬೆಳೆದಿರುವ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಕೂಟಗಳ ಮೂಲಕ ನೂರಾರು ಮಂದಿ ಕಲಾವಿದರು ತಮ್ಮ ಅಸ್ತಿತ್ವವನ್ನು ಕಂಡುಕೊಂಡಿರುವರು.

ಈ ಪರಿಪೂರ್ಣ ಕಲೆ ಕೇವಲ ಜನಾಶ್ರಯದಿಂದಲೇ ಬೆಳೆದು ನಿಂತಿದೆ ಎನ್ನುವುದು ಸತ್ಯ ಎಂದರು. ‘ಅನನ್ಯ ಫೀಡ್ಸ್’ ಪಶು ಆಹಾರ ತಯಾರಿಕಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನಗರದ ಶಕ್ತಿನಗರ ಸರಕಾರಿ ಶಾಲಾ ವಠಾರದಲ್ಲಿ ಜರಗಿದ ಖ್ಯಾತ ಚೆಂಡೆ – ಮದ್ದಳೆವಾದಕ ದಿವಾಣ ಭೀಮಭಟ್ಟರ ಸಂಸ್ಮರಣೆ ಹಾಗೂ ದಿವಾಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಅಭ್ಯಾಗತರಾಗಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಐಎಎಸ್, ಮಾತನಾಡುತ್ತಾ ಯಕ್ಷಗಾನ ಕಲೆಯ ಸಂರಕ್ಷಣೆ ಎಷ್ಟು ಅನಿವಾರ್ಯವೋ, ಅಷ್ಟೇ ಅನಿವಾರ್ಯತೆ ಯಕ್ಷಗಾನ ಕಲಾವಿದರ ಸಂರಕ್ಷಣೆಯೂ ಹೌದು. ಈ ನೆಲೆಯಲ್ಲಿ ಸಾಂಪ್ರದಾಯಿಕ ಯಕ್ಷಗಾನದ ಅರಿವನ್ನು ಮುಂದಿನ ಪೀಳಿಗೆಗೆ ತಿಳಿಹೇಳುವ ಗುರುತರ ಜವಾಬ್ದಾರಿ ಹಿರಿಯ ಕಲಾವಿದರದ್ದಾಗಿದೆ. ಅಂತೆಯೇ ಯುವ ಪೀಳಿಗೆಯೂ ನಮ್ಮ ನಾಡಿನ ಈ ಸಮೃದ್ಧ ಕಲೆಯನ್ನು ಸಂರಕ್ಷಿಸಿ ಬೆಳೆಸುವಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತಾಗಬೇಕು ಎಂದರು.

ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ಲಯಬ್ರಹ್ಮ ದಿವಾಣ ಭಟ್ಟರ ಸಂಸ್ಮರಣೆಗೈದರು. ಚೆಂಡೆ – ಮದ್ದಳೆ ವಾದನಲ್ಲಿ ಅಪರಿಮಿತವಾದ ಹಿಡಿತವನ್ನು ಸಾಧಿಸಿಕೊಂಡಿದ್ದ ದಿವಾಣರು ತನ್ನ ಶಾಸ್ತ್ರೀಯ ಹಾಗೂ ಲಯಬದ್ಧತೆಯ ವಾದನದ ಮೂಲಕ ಪ್ರಭುತ್ವವನ್ನು ಸಾಧಿಸಿದ್ದರು. ಇಂತಹ ಅನನ್ಯ ಸಾಧಕರ ಸಂಸ್ಮರಣೆಯಿಂದ ಯುವ ಕಲಾವಿದರಿಗೆ ಪ್ರೇರಣೆ ಲಭಿಸಿದಂತಾಗುತ್ತದೆ ಎಂದರು.
ಇದೇ ಸಂದರ್ಭ ಹಿರಿಯ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ “ದಿವಾಣ ಪ್ರಶಸ್ತಿ ಪ್ರದಾನ” ಮಾಡಲಾಯಿತಲ್ಲದೆ ಪ್ರಸಿದ್ಧ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿಯವರಿಗೆ ‘ದಿವಾಣ ಕಲಾಗೌರವ’ ನೀಡುವ ಮೂಲಕ ಗೌರವಿಸಲಾಯ್ತು.
ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟ ಅಭಿನಂದನಾ ಭಾಷಣಗೈದರು. ಯಕ್ಷಗಾನ ಪ್ರಸಂಗಕರ್ತ ಹಾಗೂ ಹಿರಿಯ ಅರ್ಥದಾರಿ ಪೊಳಲಿ ನಿತ್ಯಾನಂದ ಕಾರಂತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟಕರಾದ ದಿವಾಣ ಗೋವಿಂದ ಭಟ್ಟ, ಶ್ರೀಮತಿ ಅನಿತಾ ಗೋವಿಂದ ಭಟ್ಟ ಹಾಗೂ ಕುಮಾರಿ ಅನನ್ಯ ಭಟ್ಟ ಅತಿಥಿಗಳನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ “ಬ್ರಹ್ಮಕಪಾಲ – ಇಂದ್ರಜಿತು” ಯಕ್ಷಗಾನ ಬಯಲಾಟ ಜರಗಿತು.

No Comments

Leave A Comment