Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ದೆಹಲಿ ಅಗ್ನಿ ಅವಘಡಕ್ಕೆ 27 ಮಂದಿ ಬಲಿ: ಹಲವರು ನಾಪತ್ತೆ, ಇಬ್ಬರ ಬಂಧನ, ಕಟ್ಟಡ ಮಾಲೀಕ ಪರಾರಿ

ನವದೆಹಲಿ: ರಾಜಧಾನಿ ನವದೆಹಲಿಯ ಮೂರು ಮಹಡಿಯ ವಾಣಿಜ್ಯ ಕಟ್ಟಡವೊಂದರಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 27 ಮಂದಿ ಸಜೀವ ದಹನವಾಗಿದ್ದು, ದುರ್ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ಬೆಂಕಿ ಅವಘಡದ ನಂತರ ನಾಪತ್ತೆಯಾದವರ ಸಂಬಂಧಿಕರು ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಸಾಧ್ಯವಾಗದೆ ಭಯಭೀತರಾಗಿದ್ದಾರೆ.

ಯಶೋಧ ದೇವಿಗಾಗಿ ನಾವು ಸ್ಥಳದಲ್ಲಿ ಸಾಕಷ್ಟು ಹುಡುಕಾಟ ನಡೆಸುತ್ತಿದ್ದೇವೆ. ಆದರೆ, ಅವರು ಎಲ್ಲಿಯೂ ಪತ್ತೆಯಾಗುತ್ತಿಲ್ಲ. ಗೆಳೆಯೊಬ್ಬರಿಂದ ಅಗ್ನಿ ಅವಘಡ ಸಂಭವಿಸಿರುವ ಕುರಿತು ಮಾಹಿತಿ ತಿಳಿದಿತ್ತು. ಕೂಡಲೇ ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದೆವು. ಆಸ್ಪತ್ರೆಯಲ್ಲಿಯೂ ಹುಡುಕಾಟ ನಡೆಸಿದ್ದೇವೆ. ಆದರೆ, ಎಲ್ಲಿಯೂ ಪತ್ತೆಯಾಗುತ್ತಿಲ್ಲ ಎಂದು ಗೋವಿಂದ ಎಂಬುವವರು ಹೇಳಿದ್ದಾರೆ.

ಮುಸ್ಕಾನ್ ದೂರವಾಣಿ ಕರೆ ಮಾಡಿ, ನನ್ನನ್ನು ಕಾಪಾಡಿ ಎಂದು ಹೇಳಿದ್ದಳು. ಕೂಡಲೇ ಆಕೆಯ ಕಚೇರಿ ಬಳಿ ಬಂದಿದ್ದೆವು. ಸ್ಥಳಕ್ಕೆ ಬಂದ ಬಳಿಕ ಆಕೆ ಸಂಪರ್ಕಕ್ಕೇ ಸಿಗಲಿಲ್ಲ. ಆಸ್ಪತ್ರೆ ಸೇರಿ ಎಲ್ಲೆಡೆ ಹುಡುಕಾಡಿದೆವು. ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಮುಸ್ಕಾನ್ ಅವರ ಕುಟುಂಬದ ಸದಸ್ಯ ನರ್ಗೀಸ್ ಅವರು ಹೇಳಿದ್ದಾರೆ.

ನಿನ್ನೆ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಈ ವರೆಗೂ ಕಟ್ಟಡದಿಂದ 27 ಶವಗಳನ್ನು ಹೊರತೆಗೆಯಲಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದೀಗ ಸ್ಥಳದಲ್ಲಿ ಅಗ್ನಿ ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ಕೂಡ ಸ್ಥಳಕ್ಕೆ ಧಾವಿಸುತ್ತಿದೆ ಎಂದು ತಿಳಿಸಿದ್ದಾರೆ.

ಡಿಸಿಪಿ (ಹೊರ ಜಿಲ್ಲೆ) ಸಮೀರ್ ಶರ್ಮಾ ಅವರು ಮಾಹಿತಿ ನೀಡಿ, ಇದೂವರೆಗೆ ಒಟ್ಟು 50 ಜನರನ್ನು ರಕ್ಷಿಸಲಾಗಿದೆ. 27-28 ಮಂದಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿವೆ. ಈ ಸಂಬಂಧ ಪರಿಶೀಲನೆಗಳ ನಡೆಸಲಾಗುತ್ತಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.

ಇದು ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವಾಗಿದ್ದು, ಕಂಪನಿಗಳಿಗೆ ಕಚೇರಿ ಸ್ಥಳವನ್ನು ಒದಗಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳು ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿ ಮೊದಲನೇ ಮಹಡಿಯಲ್ಲಿದ್ದು, ಆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಸಂಬಂಧ ಇದೀಗ ಕಂಪನಿಯ ಮಾಲೀಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಬ್ಬರ ಬಂಧನ
ಬೆಂಕಿ ಹೊತ್ತಿಕೊಂಡ ಕಂಪನಿಯ ಇಬ್ಬರು ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಬಂಧಿಸಿದ್ದಾರೆ. ಬಂಧಿತ ಇಬ್ಬರನ್ನು ವರುಣ್ ಗೋಯಲ್ ಮತ್ತು ಸತೀಶ್ ಗೋಯಲ್ ಎಂದು ಗುರುತಿಸಲಾಗಿದೆ.

ಡಿಎನ್ಎ ಪರೀಕ್ಷೆ
ಕಟ್ಟಡದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗ ಹಲವು ಸ್ಥಳಗಳಲ್ಲಿ ಸುಟ್ಟ ದೇಹದ ಭಾಗಗಳು ಮತ್ತು ಅವಶೇಷಗಳು ಪತ್ತೆಯಾಗಿವೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಗುರುತಿಸಲು ವಿಧಿವಿಜ್ಞಾನ ತಂಡಗಳು ಡಿಎನ್‌ಎ ಪರೀಕ್ಷೆ ನಡೆಸಲಿವೆ ಎಂದು ತಿಳಿಸಿದ್ದಾರೆ.

ಕಟ್ಟಡ ಮಾಲೀಕ ಪರಾರಿ

ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಅನುಮತಿ ಪಡೆಯದೇ ಮಾಲೀಕ ಕಟ್ಟಡ ನಿರ್ಮಿಸಿದ್ದು, ಘಟನೆ ಬಳಿಕ ಮಾಲೀಕ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಕಟ್ಟಡದ ಮಾಲೀಕರನ್ನು ಮನೀಶ್ ಲಾಕ್ರಾ ಎಂದು ಗುರುತಿಸಲಾಗಿದ್ದು, ಆದಷ್ಟು ಬೇಗ ಕಟ್ಟಡದ ಮಾಲೀಕನನ್ನು ಬಂಧಿಸಲಾಗುವುದು ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.

No Comments

Leave A Comment