‘ಗುಡ್ ಕಾಪಿ ಪೇಸ್ಟ್ ಜಾಬ್‘: ನನ್ನನ್ನು ಟ್ರೋಲ್ ಮಾಡಲು ಹೇಳಲಾಗಿದೆ; ಡಿಕೆಶಿ ಬೆಂಬಲಿಗರ ವಿರುದ್ಧ ರಮ್ಯಾ ಸಿಡಿಮಿಡಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸಿಡಿದೆದ್ದಿದ್ದಾರೆ. ಮಾಜಿ ಸಚಿವ ಎಂಬಿ ಪಾಟೀಲ್ ಅವರ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದ ರಮ್ಯಾ ಈಗ ಮತ್ತೊಂದು ಟ್ವೀಟ್ ಮೂಲಕ ಕನಕಪುರ ಬಂಡೆ ಡಿಕೆಶಿಗೆ ಟಾಂಗ್ ನೀಡಿದ್ದಾರೆ. ಈ ಹಿನ್ನೆಲೆ ರಮ್ಯಾ ಅವರ ನಡೆ ಭಾರೀ ಕುತೂಹಲ ಕೆರಳಿಸಿದೆ.
ಎಂಬಿ ಪಾಟೀಲ್ ಪರ ಟ್ವೀಟ್ ಬೆನ್ನಲ್ಲೇ ರಮ್ಯಾ ವಿರುದ್ಧ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಅದಲ್ಲದೇ ರಮ್ಯಾ ಅವರನ್ನು ಟ್ರೋಲ್ ಮಾಡಿ, ಆಕ್ರೋಶ ವ್ಯಕ್ತಪಡಿಸಿ ಎಂದು ಕಾಂಗ್ರೆಸ್ ಕಚೇರಿಯಿಂದ ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಸಂದೇಶ ಹೋಗಿದೆ ಎನ್ನಲಾಗಿದೆ. ಇದಕ್ಕೆ ರಮ್ಯಾ ಈಗ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ತಮ್ಮ ವಿರುದ್ಧ ಕಳಿಸಿದ್ದ ಸಂದೇಶವನ್ನು ಕೂಡ ಲಗತ್ತಿಸಿದ್ದಾರೆ.
ಬೇರೆ ಬೇರೆ ಪಕ್ಷಗಳ ನಾಯಕರ ಕುಟುಂಬಗಳ ನಡುವೆ ಮದುವೆ ಸಂಬಂಧಗಳು ಏರ್ಪಟ್ಟಿವೆ. ಹಾಗಿರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಮತ್ತು ಅಶ್ವತ್ಥ ನಾರಾಯಣ ಅವರ ಭೇಟಿ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದು ಅಚ್ಚರಿ ಎನಿಸುತ್ತಿದೆ. ಇವುಗಳನ್ನೆಲ್ಲ ಬಿಟ್ಟು ಕಾಂಗ್ರೆಸ್ ಪಕ್ಷದ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಬಾರದೇ?’ ಎಂದಿದ್ದರು.
ಈ ಹೇಳಿಕೆ ಬೆನ್ನಲ್ಲೇ ಟ್ವಿಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಡಿಕೆಶಿ ಬೆಂಬಲಿಗರು ರಮ್ಯ ಅವರ ಅವಹೇಳನ ಮಾಡುವ ಟ್ವೀಟ್ ಮಾಡುತ್ತಿದ್ದಾರೆ. ಈ ಟ್ವೀಟ್‌ಗಳನ್ನು ಹಂಚಿಕೊಂಡಿರುವ ರಮ್ಯ ಅವರು ಡಿಕೆಶಿ ಬೆಂಬಲಿಗರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಅಧ್ಯಕ್ಷ ಬಿ.ಆರ್. ನಾಯ್ಡು ಅವರು, ‘ರಮ್ಯಾ ಅವರೇ ನಿಮಗೆ ಇವಾಗ ಎಚ್ಚರವಾಯಿತಾ? ಇಷ್ಟು ದಿನ ಎಲ್ಲಿದ್ದಿರಿ? ನಟ ಅಂಬರೀಷ ಅವರು ನಿಧನರಾಗಿದ್ದಾಗ ಕೂಡ ನೀವು ಬಂದಿರಲಿಲ್ಲ. ದಯವಿಟ್ಟು ಇದನ್ನು ಮಂಡ್ಯದ ಮತದಾರರಿಗೆ ತಿಳಿಸುವಿರಾ?’ ಎಂದು ಕೇಳಿದ್ದರು.
ಇದೇ ಟ್ವೀಟ್‌ನ್ನು ರಿಟ್ವೀಟ್ ಮಾಡಿ ಬಿ.ಆರ್. ನಾಯ್ಡು ಅವರಿಗೆ ರಮ್ಯಾ ತಿರುಗೇಟು ನೀಡಿದ್ದಾರೆ. ‘ಗುಡ್ ಕಾಪಿ ಪೇಸ್ಟ್ ಜಾಬ್’ (ನಕಲು ಮಾಡುವುದು) ಎಂದು ಕಿಚಾಯಿಸಿದ್ದಾರೆ.
ನನ್ನನ್ನು ಟ್ರೋಲ್ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷದ ಕಚೇರಿಯಿಂದ ಈ ರೀತಿಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ನಿಮಗೆ ಆ ತೊಂದರೆ ಬೇಡ. ನಾನೇ ನನ್ನನ್ನು ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಚಾರ ಸಮಿತಿ ಮುಖ್ಯಸ್ಥ ಶ್ರೀವಸ್ತ ವೈ ಬಿ ಅವರನ್ನು ಟ್ಯಾಗ್ ಮಾಡಿ ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ.