Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

‘ಅಸಾನಿ’ ಎಫೆಕ್ಟ್: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ, ಶೀತಗಾಳಿ ಮುಂದುವರಿಕೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತ ಆಗಿ ಪರಿವರ್ತನೆ ಆಗಲಿದ್ದು, ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತಷ್ಟು ಚುರುಕು ಪಡೆದುಕೊಂಡಿದೆ. ಚಂಡಮಾರುತಕ್ಕೆ ಅಸಾನಿ ಎಂದು ಹೆಸರಿಡಲಾಗಿದೆ.(Asani cyclone)

ಕಳೆದ ಭಾನುವಾರ ಮಧ್ಯಾಹ್ನದಿಂದಲೇ ಚಂಡಮಾರುತ ಪರಿಣಾಮ ನೆರೆಯ ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ತೀವ್ರ ಮಳೆಯಾಗುತ್ತಿದ್ದು, ಕರ್ನಾಟಕದ ಕರಾವಳಿ, ರಾಜಧಾನಿ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳಲ್ಲಿ ಪ್ರಭಾವ ಬೀರಿದೆ.

ಚಂಡಮಾರುತದ ವೇಗ ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಕೊಡಗು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಯೆಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ.

ನಿನ್ನೆ ಮಂಗಳವಾರ ಸಂಜೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥದಂತಹ ಮಾದರಿಯು ಪತ್ತೆಯಾಗಿದೆ. ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥೈಲ್ಯಾಂಡ್‌ನಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಇದನ್ನು ದಡಕ್ಕೆ ಎಳೆದಿದ್ದಾರೆ.

ರಥವು ಆಗ್ನೇಯ ಏಷ್ಯಾದ ದೇಶಗಳ ಮಠದ ಆಕಾರವನ್ನು ಹೋಲುತ್ತದೆ. ಆಸಾನಿ ಚಂಡಮಾರುತದ ಪ್ರಭಾವದಿಂದ ರಥವು ಆಂಧ್ರಪ್ರದೇಶ ಕರಾವಳಿಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ.

ಇನ್ನೂ ಒಂದೆರಡು ದಿನ ಮಳೆಯಾಗುವ ಸಾಧ್ಯತೆ: ಅಸಾನಿ ಚಂಡಮಾರುತ ಪ್ರಭಾವ ರಾಜಧಾನಿ ಬೆಂಗಳೂರಿನ ಮೇಲೆ ಇನ್ನು ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಆಂಧ್ರ ಪ್ರದೇಶ ಉತ್ತರ ಭಾಗ ಮತ್ತು ಒಡಿಶಾ ಮೂಲಕ ಹಾದುಹೋಗಿ ಇಂದು ನಾಳೆಯ ನಂತರ ಚಂಡಮಾರುತ ಪ್ರಭಾವ ದುರ್ಬಲವಾಗಲಿದೆ.

ಇದನ್ನೂ ಓದಿ: ಆಸಾನಿ ಚಂಡಮಾರುತ: ಸತತ ಮಳೆ, ಪ್ರತಿಕೂಲ ಹವಮಾನ, ಹಲವು ವಿಮಾನಗಳ ಹಾರಾಟ ರದ್ದು

ಮೇ ತಿಂಗಳ ಬೇಸಿಗೆಯಾದರೂ ಈಗ ರಾಜಧಾನಿ ಬೆಂಗಳೂರಿನಲ್ಲಿ ಮಳೆ-ಚಳಿಯ ವಾತಾವರಣ, ಹಲವರು ಮಳೆಗೆ ಕೊಡೆಯನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಬಹುತೇಕ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಇದೇ ವಾತಾವರಣವಿದೆ. ಮುಂದಿನ ಮೂರು ದಿನ ಇದೇ ರೀತಿಯ ವಾತಾವರಣವಿರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಮಲೆನಾಡುಗಳಲ್ಲಿ ಇಂದು ಮತ್ತು ನಾಳೆ ಮಳೆ ಮುಂದುವರಿಯಲಿದೆ. ಹಲವು ಕಡೆಗಳಲ್ಲಿ ವಿಪರೀತ ಗಾಳಿ ಮಳೆಗೆ ಮರಗಳು ಧರೆಗುರುಳಿವೆ.

No Comments

Leave A Comment