Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

‘ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದವರು’-ನಳಿನ್‌ಕುಮಾರ್ ಕಟೀಲು ಆರೋಪ

ಬೆಂಗಳೂರು:ಮೇ 08: ಡ್ರಗ್ಸ್ ಹಣದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿದ್ದಾರೆ. ಅವರಷ್ಟು ಭ್ರಷ್ಟಾಚಾರಿ ಮತ್ಯಾರಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾನುವಾರ ಮಾತನಾಡಿದ ಅವರು, ಹುಬ್ಬಳ್ಳಿ, ಶಿವಮೊಗ್ಗ, ಡಿಜೆ ಹಳ್ಳಿ, ಕೆಜೆ ಹಳ್ಳಿ ದಾಂಧಲೆ ಹಿಂದೆ ಸಿದ್ದರಾಮಯ್ಯ ಅವರ ಷಡ್ಯಂತ್ರವಿದೆ. ಅರ್ಕಾವತಿ ರೀಡೂ ಪ್ರಕರಣದ ತನಿಖೆ ನಡೆದರೆ ಸಿದ್ದರಾಮಯ್ಯ ತಮ್ಮ ಮುಂದಿನ ಜೀವನವನ್ನು ಜೈಲಿನಲ್ಲೇ ಕಳೆಯಬೇಕಾಗುತ್ತದೆ ಎಂದರು.

ಅರಾಜಕತೆಯ ಸೃಷ್ಟಿಕರ್ತ ಪಕ್ಷ ಎಂದರೆ ಕಾಂಗ್ರೆಸ್. ಆ ಪಕ್ಷದ ನಾಯಕರು ಅಧಿಕಾರವಿಲ್ಲದೆ ವಿಲವಿಲ ಒದ್ದಾಡುತ್ತಿದ್ದಾರೆ. ಸದ್ಯ ಕಾಂಗ್ರೆಸ್ ನಲ್ಲಿ 150 ಪ್ರಧಾನ ಕಾರ್ಯದರ್ಶಿಗಳಿದ್ದಾರೆ. ಮುಂದೆ ಈ ಹುದ್ದೆಯ ಜನಸಂಖ್ಯೆ 250 ದಾಟಬಹುದು ಎಂದ ಅವರು, ರಾಜ್ಯದಲ್ಲಿ ಆಳ್ವಿಕೆ ಮಾಡಿದ ಎಲ್ಲಾ ಕಾಂಗ್ರೆಸ್ ಮುಖ್ಯಮಂತ್ರಿಗಳು ಕೂಡಾ ಒಂದಿಲ್ಲೊಂದು ವಿಚಾರದಲ್ಲಿ ಭ್ರಷ್ಟಾಚಾರಿಗಳು. ಶಾಸ್ತ್ರಿ ಹೊರತುಪಡಿಸಿ ಕಾಂಗ್ರೆಸ್‌ನ ಮತ್ತೆಲ್ಲಾ ಪ್ರಧಾನಿಗಳೂ ಕಳಂಕಿತರೇ. ಭ್ರಷ್ಟಾಚಾರರಹಿತ ಸರ್ಕಾರಕ್ಕೆ ವಾಜಪೇಯಿ ಮತ್ತು ಮೋದಿ ಸರ್ಕಾರ ಹೆಸರಾಗಿದೆ ಎಂದರು.

ಪಿಎಸ್‌ಐ ಅಕ್ರಮ ಗಮನಕ್ಕೆ ಬಂದ ಕೂಡಲೇ ಸಿಎಂ ಬೊಮ್ಮಾಯಿ ತನಿಖೆಗೆ ವಹಿಸಿದರು. ಸರ್ಕಾರ ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸುತ್ತಿದೆ ಎಂದವರು ಇದೇ ವೇಳೆ ತಿಳಿಸಿದರು.

ಮಹಾತ್ಮಗಾಂಧೀಜಿಯವರು ಸ್ವಾತಂತ್ರ್ಯ ನಂತರ ಭಾರತ ರಾಮರಾಜ್ಯ ಆಗಬೇಕು ಎಂದರೇ ಹೊರತು ಜಾತ್ಯಾತೀತ ರಾಜ್ಯ ಆಗಬೇಕು ಎಂದು ಹೇಳಿಲ್ಲ. ಪ್ರತೀ ವ್ಯಕ್ತಿ ರಾಮ ಆದಾಗ ಮಾತ್ರ ದೇಶ ರಾಮರಾಜ್ಯವಾಗಲು ಸಾಧ್ಯ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಕಾರ್ಯ ನಡೆಯಬೇಕು ಎಂದವರು ಇದೇ ವೇಳೆ ತಿಳಿಸಿದರು.

ಚಾ ಮಾರುವ ಹುಡುಗ ಪ್ರಧಾನಿಯಾಗಬಲ್ಲ, ಮತಗಟ್ಟೆ ಅಧ್ಯಕ್ಷನಾಗಿದ್ದ ಹುಡುಗ ಕೇಂದ್ರ ಗೃಹ ಸಚಿವ, ಸಾಮಾನ್ಯ ಹಳ್ಳಿ ಹುಡುಗ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಬಹುದು ಎಂದು ತೋರಿಸಿಕೊಟ್ಟ ಪಕ್ಷ ಬಿಜೆಪಿ. ಪರಿವಾರ, ಹಣಬಲದಿಂದ ಬಂದು ಈ ಹುದ್ದೆಗೇರಿದವರು ನಾವಲ್ಲ. ರಾಷ್ಟ್ರಭಕ್ತಿ, ಸಾಮಾಜಿಕ ಬದ್ದತೆಯಿಂದ ರಾಜಕೀಯದಲ್ಲಿ ಮೇಲೇರಿದವರು. ಆದರೆ ಕಾಂಗ್ರೆಸ್‌ಗೆ ಪಕ್ಷ ಕಟ್ಟುವುದು ಹೇಗೆಂಬುದೇ ತಿಳಿದಿಲ್ಲ. ಇನ್ನು ದೇಶವನ್ನು ಹೇಗೆ ಕಟ್ಟುತ್ತಾರೆ ಎಂದವರು ಪ್ರಶ್ನಿಸಿದರು.

ಒಂದು ಪಕ್ಷ ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ. ಇದನ್ನು ಪ್ರಶ್ನಿಸಿದವರಿಗೆ ಉತ್ತರವೂ ಇದೆ. ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದರೂ, ನಮ್ಮ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತನಿಗೂ ಶಾಸಕನಾಗುವ ಭಾಗ್ಯ ಒದಗಿಸಲಾಗುತ್ತದೆ ಎಂದು ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಕಟೀಲು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಹಲವಾರು ಮಂದಿ ಬಿಜೆಪಿ ಕದ ತಟ್ಟುತ್ತಿದ್ದಾರೆ. ನಮಗೆ ಪುರುಸೊತ್ತೇ ಇಲ್ಲದಷ್ಟು ಜನ ಬರುತ್ತಿದ್ದು, ಪಟ್ಟಿ ಮಾಡಿಕೊಂಡು ಹಂತ ಹಂತವಾಗಿ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆಯವರು ಸಾವಿರಾರು ಕೋಟಿ ರೂ.ಗಳ ಒಡೆಯರು. ಈ ಕೋಟಿ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಪಿಎಸ್‌ಐ ನೇಮಕಾತಿ ತನಿಖೆ ಕೊನೆಯ ಹಂತಕ್ಕೆ ಬರುವ ವೇಳೆ ಕಾಂಗ್ರೆಸ್ ನ ಶೇ. 80 ಜನ ಜೈಲಿನಲ್ಲಿರುತ್ತಾರೆ ಎಂದು ತಿಳಿಸಿದರು.

No Comments

Leave A Comment