Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಬಸ್’ಗೆ ಕಾರು ಡಿಕ್ಕಿ, ಇಬ್ಬರ ದುರ್ಮರಣ

ಬೆಂಗಳೂರು: ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಗುರುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಸುಮುಖ್ (22) ಮತ್ತು ಲೀನಾ ನಾಯ್ಡು (19) ಎಂದು ಗುರ್ತಿಸಲಾಗಿದೆ. ಗುರುವಾರ ಸಂಜೆ 5.15ರ ಸುಮಾರಿಗೆ ಸುಮುಖ್ ಹೋಂಡಾ ಸಿಟಿ ಕಾರಿನಲ್ಲಿ ತನ್ನ ಸ್ನೇಹಿತೆ ಲೀನಾ ನಾಯ್ಡು ಜೊತೆ ನೈಸ್ ರಸ್ತೆಯ ಪಿಇಎಸ್ ಕಾಲೇಜು ಕಡೆಯಿಂದ ಸೋಂಪುರ ಕಡೆಗೆ ವೇಗವಾಗಿ ಬರುವಾಗ ಬಿಡಿಎ ಟೋಲ್ ಬಳಿ ಕಾರು ನಿಯಂತ್ರಣ ತಪ್ಪಿದೆ. ಈ ವೇಳೆ ಎದುರು ದಿಕ್ಕಿನ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ಮಿನಿ ಬಸ್’ಗೆ ಡಿಕ್ಕೆ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಉರುಳಿ ಬಿದ್ದ ಪರಿಣಾಮ ಚಾಲಕ ಸುಮುಖ್ ಹಾಗೂ ಲೀನಾ ನಾಯ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ವೇಳೆ ಖಾಸಗಿ ಮಿನಿ ಬಸ್ ಕೂಡ ಉರುಳಿ ಬಿದ್ದಿದ್ದು, ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಹಾಗೂ ಇತರೆ ವಾಹನಗಳ ಸವಾರರು ಪ್ರಯಾಣಿಕರನ್ನು ಹೊರಗೆ ಎಳೆದು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಚಾಲಕ ಕಾಲೊಂದನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಸುಮುಖ್’ನ ಕಾರು ಖಾಸಗಿ ಮಿನಿಬಸ್’ಗೆ ಡಿಕ್ಕಿಯಾದ ಸಂದರ್ಭದಲ್ಲಿ ಕಾರಿನ ಮುಂದಿನ ಚಕ್ರ ಕಿತ್ತು ಮುಂದೆ ಹೋಗುತ್ತಿದ್ದ ಫಾರ್ಚುನರ್ ಕಾರಿನ ಹಿಂಬದಿಗೆ ಗುದ್ದಿದ್ದರಿಂದ ಕಾರು ಕೂಡ ಜಖಂ ಆಗಿದೆ. ಆದರೆ, ಕಾರಿನ ಸವಾರರಿಗೆ ಯಾವುದೇ ಸಮಸ್ಯೆಗಳಾಗಿಲ್ಲ ಎಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸುಮುಖ್ ಕಾರನ್ನು ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಅಪಘಾತವಾಗಿರುವ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

No Comments

Leave A Comment