Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

‘ಹಾಲಿ ನಾಯಕರನ್ನು ಹೊರಗಿಟ್ಟು ಹೊಸ ಮುಖಗಳಿಗೆ ಮಣೆ ಪ್ರಯೋಗ ಯಶಸ್ವಿ’-ಬಿ.ಎಲ್. ಸಂತೋಷ್ ಹೇಳಿಕೆ ಬಿಜೆಪಿಗರಲ್ಲಿ ಆತಂಕ

ಮೈಸೂರು:ಮೇ 1 : ಗುಜರಾತ್, ಪಂಜಾಬ್ ಚುನಾವಣೆಗಳಲ್ಲಿ ಹಾಲಿ ಶಾಸಕರು, ಕುಟುಂಬದವರನ್ನು ಹೊರಗಿಟ್ಟು ಚುನಾವಣೆ ನಡೆಸಲಾಗಿದೆ. ಹೊಸ ಮುಖಗಳ ಪರಿಚಯ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿದ್ದು, ಇಂತಹ ಪ್ರಯೋಗ ಪಕ್ಷದಲ್ಲಿ ಮಾತ್ರ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿರುವುದು ಪಕ್ಷದ ಶಾಸಕ, ಸಚಿವರ ಆತಂಕಕ್ಕೆ ಕಾರಣವಾಗಿದೆ.

ಮೈಸೂರಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಸಂತೋಷ್, ನಾಯಕತ್ವ ಬದಲಾವಣೆಯು ಬಿಜೆಪಿಗೆ ಶಕ್ತಿಯಾಗಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರು, ಅವರ ಕುಟುಂಬಸ್ಥರ ಬದಲಾಗಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಗುಜರಾತ್‌ನಲ್ಲೂ ಎರಡು ಬಾರಿ ಗೆದ್ದ ಪಾಲಿಕೆ ಸದಸ್ಯರನ್ನು ನಿವೃತ್ತಿಗೊಳಿಸಿ ಹೊಸ ಮುಖಗಳನ್ನು ಅಧಿಕಾರಕ್ಕೆ ತರಲಾಗಿದೆ. ಎರಡೂ ಕಡೆಯೂ ಈ ಪ್ರಯೋಗ ಯಶಸ್ವಿಯಾಗಿದೆ ಎಂದರು.

ಬಿ.ಎಲ್. ಸಂತೋಷ್ ಅವರ ಈ ಮಾತು, ರಾಜ್ಯ ಬಿಜೆಪಿ ಶಾಸಕ, ಸಚಿವರಲ್ಲಿ ಆತಂಕ ಮೂಡಿಸಿದೆ. ದೆಹಲಿ, ಗುಜರಾತ್ ಮಾದರಿ ಪ್ರಯೋಗ ರಾಜ್ಯದಲ್ಲಿಯೂ ಜಾರಿಯಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಯೋಗ ರಾಜ್ಯದಲ್ಲಿ ರೂಪು ತಳೆದರೆ ಹಲವು ಶಾಸಕರು, ಸಚಿವರು ಟಿಕೆಟ್ ಕಳೆದುಕೊಳ್ಳಬೇಕಾಗಿ ಬರಬಹುದು.

ಪ್ರತಿ ಚುನಾವಣೆಯಲ್ಲಿಯೂ ದೇಶದಲ್ಲಿ ಬದಲಾವಣೆಯ ಹೊಸ ಶಖೆ ಆರಂಭವಾಗುತ್ತಿದ್ದು, ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಬಿಜೆಪಿ ಅಭ್ಯರ್ಥಿಗಳು ಮೂರು ಬಾರಿಯೂ ಗೆಲ್ಲುತ್ತಿರುವುದು ಪಕ್ಷದ ಸಂಘಟನಾ ಶಕ್ತಿಗೆ ದೊರೆತ ಪ್ರತಿಫಲ. ಮುಂದೆ ಪಕ್ಷದಲ್ಲಿ ಇನ್ನಷ್ಟು ಬದಲಾವಣೆಗಳು ಆಗಲಿವೆ. ಕಾಂಗ್ರೆಸ್‌ನಂತೆ ಕುಟುಂಬ ರಾಜಕಾರಣ, ಸ್ವಜನ ರಾಜಕಾರಣಕ್ಕೆ ಬಿಜೆಪಿಯಲ್ಲಿ ಎಂದಿಗೂ ಅವಕಾಶವಿರುವುದಿಲ್ಲ ಎಂದು ಬಿ.ಎಲ್. ಸಂತೋಷ್ ತಿಳಿಸಿದರು.

 

No Comments

Leave A Comment