ಮಣಿಪಾಲ : ಧಗಧಗನೆ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ : ಲಕ್ಷಾಂತರ ರೂ.ನಷ್ಟ : ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸಲು ಹರಸಾಹಸ
ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ತಡ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ವೆಸ್ಟೆಕ್ ಎಂಟರ್ ಪ್ರೈಸಸ್ ಪ್ರೈ .ಲಿ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದೆ. ಇದೊಂದು ಕೆಮಿಕಲ್ ಫ್ಯಾಕ್ಟರಿಯಾದ ಕಾರಣ ಬೆಂಕಿ ತೀವ್ರ ಸ್ವರೂಪದಲ್ಲಿ ಹಬ್ಬಿ ಬೆಂಕಿಯ ಕೆನ್ನಾಲಗೆ ಆಕಾಶದೆತ್ತರಕ್ಕೆ ಚಿಮ್ಮಿದೆ. ಘಟನಾ ಸ್ಥಳದ ಸುತ್ತಮುತ್ತ ಕೆಲಕಾಲ ದಟ್ಟ ಹೊಗೆ ಆವರಿಸಿ ಸ್ಥಳೀಯರಲ್ಲಿ ಆತಂಕಕ್ಕೂ ಕಾರಣವಾಯಿತು. ಬಳಿಕ ಅಗ್ನಿ ಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಿದರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ.
ಕೆಮಿಕಲ್ ಫ್ಯಾಕ್ಟರಿಯಾದ ಕಾರಣ ಭಾರೀ ಪ್ರಮಾಣದ ಆಯಿಲ್ ಗಳು ಬೆಂಕಿಗೆ ಈಡಾಗಿ ಇಡೀ ಫ್ಯಾಕ್ಟರಿ ಧಗಧಗನೆ ಉರಿಯಿತು. ದಟ್ಟ ಹೊಗೆಯೊಂದಿಗೆ ಸುಟ್ಟ ವಾಸನೆ ಹಬ್ಬಿದ್ದರಿಂದ ಸ್ಥಳೀಯರು ರಾತ್ರಿ ವೇಳೆ ಕೆಲಹೊತ್ತು ನಿದ್ದೆ ಕಳೆದುಕೊಳ್ಳಬೇಕಾಯಿತು. ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಷೇ ತಿಳಿದು ಬರಬೇಕಿದೆ.