ಉಡುಪಿ: ಸ್ವಗ್ರಾಮ ತಲುಪಿದ ಸಂತೋಷ್ ಪಾಟೀಲ್ ಮೃತದೇಹ – ಕುಟುಂಬಸ್ಥರ ಆಕ್ರಂದನ
ಉಡುಪಿ:ಏ 14 : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪಾರ್ಥಿವ ಶರೀರ ತಾಲೂಕಿನ ಬಡಸ ಗ್ರಾಮಕ್ಕೆ ತಲುಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆರೋಪಿಗಳನ್ನು ಬಂಧಿಸುವವರೆಗೂ ಶವ ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂದು ಹಠ ಹಿಡಿದ ಕುಟುಂಬಸ್ಥರಿಗೆ ಪೊಲೀಸ್ ಅಧಿಕಾರಿಗಳ ತಂಡವು ಮನವೊಲಿಕೆ ಮಾಡಿದೆ. ಮರಣೋತ್ತರ ಪರೀಕ್ಷೆ ವಿಳಂಬವಾದರೆ ಪ್ರಮುಖ ಸಾಕ್ಷ್ಯಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂತೋಷ್ ಪಾಟೀಲ್ ಮೃತದೇಹವನ್ನು ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಹಸ್ತಾಂತರ ಮಾಡಲಾಯಿತು. ಬಳಿಕ ಹವಾನಿಯಂತ್ರಿತ ಅಂಬುಲೆನ್ಸ್ ನಲ್ಲಿ ಮೃತದೇಹವನ್ನು ಬೆಳಗಾವಿಯ ಬಡಸ ಗ್ರಾಮಕ್ಕೆ ರವಾನೆ ಮಾಡಲಾಗಿತ್ತು.