ಶಾಕಿಂಗ್: ಜ್ವರ, ಕೆಮ್ಮು, ಬಿಪಿ, ಶುಗರ್ ಮಾತ್ರೆಗಳ ಬೆಲೆ ಎ.1ರಿಂದ ದುಬಾರಿ!
ನವದೆಹಲಿ, ಮಾರ್ಚ್ 26: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಇಳಿಮುಖವಾಗಿರುವುದರ ನಡುವೆ 800ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ದೇಶದಲ್ಲಿ ಪ್ಯಾರಾಸಿಟಮಲ್ ಸೇರಿದಂತೆ ರೋಗ ನಿರೋಧಕ, ರೋಗ ವಿರೋಧಿ ಮತ್ತು ನೋವು ನಿವಾರಕ ಔಷಧಿಗಳೂ ಸೇರಿ 800ಕ್ಕೂ ಹೆಚ್ಚು ಔಷಧಿಗಳ ಬೆಲೆಯಲ್ಲಿ ಏಪ್ರಿಲ್ 1ರಿಂದ ಶೇ.10ರಷ್ಟು ಏರಿಕೆ ಆಗಲಿದೆ.
ಕಳೆದ 2020 ಮತ್ತು 2021ರ ಅವಧಿಯಂತೆ ಔಷಧಿಗಳ ಬೆಲೆ ನಿಗದಿ ಪ್ರಾಧಿಕಾರ ಆಗಿರುವ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ಔಷಧಿಗಳ ಸಗಟು ಬೆಲೆ ಸೂಚ್ಯಂಕ(ಹೋಲ್ ಸೇಲ್ ಪ್ರೈಸ್ ಇಂಡೆಕ್ಸ್)ದಲ್ಲಿ ಶೇ.10.7ರಷ್ಟು ಏರಿಕೆ ಮಾಡುವುದಾಗಿ ಶುಕ್ರವಾರ ಘೋಷಿಸಿದೆ. “ಔಷಧಗಳ ಬೆಲೆ ನಿಯಂತ್ರಣ ಆದೇಶ, 2013 ರ ನಿಬಂಧನೆಗಳ ಪ್ರಕಾರ ಮುಂದಿನ ಕ್ರಮಕ್ಕಾಗಿ ಎಲ್ಲರ ಗಮನಕ್ಕೆ ತರಲಾಗಿದೆ” ಎಂದು ನೋಟಿಸ್ ಮೂಲಕ ತಿಳಿಸಲಾಗಿದೆ.
ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ.10.7ರಷ್ಟು ಏರಿಕೆ: ದೇಶದ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ 800 ಔಷಧಿಗಳ ಬೆಲೆಯಲ್ಲಿ ಶೇ.10.70ರಷ್ಟು ಏರಿಕೆ ಮಾಡುವುದಾಗಿ ರಾಷ್ಚ್ರೀಯ ಔಷಧೀಯ ಪ್ರಾಧಿಕಾರ ತಿಳಿಸಿದೆ.
ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. “ಆರ್ಥಿಕ ಸಲಹೆಗಾರ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕಚೇರಿ ಒದಗಿಸಿದ ಸಗಟು ಬೆಲೆ ಸೂಚ್ಯಂಕo ಅಂಕಿ-ಅಂಶಗಳನ್ನು ಆಧರಿಸಿ, 2020 ರಲ್ಲಿನ ಅನುಗುಣವಾದ ಅವಧಿಯಲ್ಲಿ 2021ರ ಕ್ಯಾಲೆಂಡರ್ ವರ್ಷದಲ್ಲಿ ಶೇ.10.76607ರಷ್ಟು ಸಗಟು ಬೆಲೆ ಸೂಚ್ಯಂಕದಲ್ಲಿನ ವಾರ್ಷಿಕ ಬದಲಾವಣೆ ಮಾಡಲಾಗುತ್ತದೆ,” ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಸೂಚನೆ ನೀಡಿದೆ.
800 ಅಗತ್ಯ ಔಷಧಿಗಳ ಬೆಲೆ ಏರಿಕೆ: ಯಾವುದೇ ರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಸೋಂಕು, ಜ್ವರ, ಚರ್ಮ ರೋಗಗಳು, ಹೃದ್ರೋಗಗಳು, ರಕ್ತಹೀನತೆ, ಅಧಿಕ ರಕ್ತದೊತ್ತಡವನ್ನು ಗುಣಪಡಿಸುವುದಕ್ಕಾಗಿ ಬಳಸುವ ಔಷಧಿಗಳ ಬೆಲೆಗಳು ಏಪ್ರಿಲ್ 1ರಿಂದ ಹೆಚ್ಚಾಗುತ್ತವೆ. ಅದರಲ್ಲಿ ಅಜಿಥ್ರೊಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಮೆಟ್ರೋನಿಡಜೋಲ್, ಪ್ಯಾರೆಸಿಟಮಾಲ್, ಫೆನೋಬಾರ್ಬಿಟೋನ್ ಮತ್ತು ಫೆನಿಟೋಯಿನ್ ಸೋಡಿಯಂನಂತಹ ಔಷಧಿಗಳು ಸೇರಿವೆ.