Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಕೊಲ್ಲೂರು: ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ನಿಲ್ಲಿಸಲು ವಿಎಚ್‌ಪಿ ಆಗ್ರಹ

ಉಡುಪಿ, ಮಾರ್ಚ್ 26: ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ನಿಷೇಧ ಹೇರಿದ ಬಳಿಕ ವಿಶ್ವ ಹಿಂದೂ ಪರಿಷತ್ ಈಗ ದೇವಸ್ಥಾನದ ಒಳಗೆ ನಡೆಯುವ ಧಾರ್ಮಿಕ ಪೂಜೆಗೂ ಕೈ ಹಾಕಿದೆ.

ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿ ದಿನ ಟಿಪ್ಪು ಸುಲ್ತಾನ್ ನೆನಪಿನಲ್ಲಿ ನಡೆಯುವ ಸಲಾಂ ಪೂಜೆಯನ್ನು ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಸಲಾಂ ಪೂಜೆ ನಿಲ್ಲಿಸುವಂತೆ ಮುಜಾರಾಯಿ ಸಚಿವೆ ಶಶಿಕಲಾ ಜೊಲ್ಲೆ, ಮುಜಾರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ.

ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಮಾಧ್ಯಮಗಳಿಗೆ ಈ ಕುರಿತು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಐತಿಹಾಸಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರವಾಗಿದೆ. ಭಾರತದ 108 ಶಕ್ತಿಪೀಠಗಳಲ್ಲಿ ಒಂದು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವಾಗಿದೆ. ಆದಿ ಶಂಕರಾಚಾರ್ಯರು ಮೂಕಾಂಬಿಕಾ ತಾಯಿಯನ್ನು ಇಲ್ಲಿ ನೆಲೆಗೊಳಿಸಿದ್ದಾರೆ ಎಂದರು.

ಮೂಕಾಂಬಿಕಾ ತಾಯಿಯು ದುರ್ಗೆ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಒಂದು ಅವತಾರ. ಮೂಕಾಂಬಿಕಾ ದೇವಿಯ ದೇವಸ್ಥಾನದಲ್ಲಿ ಕೋಟ್ಯಂತರ ಭಕ್ತರು ಅತೀವ ನಂಬಿಕೆಯನ್ನು ಇರಿಸಿಕೊಂಡಿದ್ದಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಒಬ್ಬ ಕ್ರೂರಿ, ಮತಾಂಧ, ಹಿಂದೂ ವಿರೋಧಿ, ಕನ್ನಡ ವಿರೋಧಿ ಸಾವಿರಾರು ಹಿಂದುಗಳನ್ನು ನರಮೇಧ ಮಾಡಿ, ನೂರಾರು ದೇವಸ್ಮಾನಗಳನ್ನು ಧ್ವಂಸಗೊಳಿಸಿದಂತಹ ಟಿಪ್ಪುವಿನ ಹೆಸರಿನಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ದೇವಿ ಮೂಕಾಂಬಿಕೆಗೆ ಸಲಾಂ ಎಂಬ ಹೆಸರಿನಲ್ಲಿ ಮಹಾಮಂಗಳಾರತಿ ಆಗುತ್ತಿರುವುದು ಕ್ಷೇತ್ರದ ಪಾವಿತ್ರತೆಗೆ ಧಕ್ಕೆ ತಂದಿದೆ. ಇದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದೆ.

ಸಲಾಂ ಎಂಬ ಹೆಸರಿನಲ್ಲಿ ಪ್ರತಿನಿತ್ಯ ದೇವಿಗೆ ಮಹಾಮಂಗಳಾರತಿಯಾಗುವುದು ಗುಲಾಮಗಿರಿಯ ಸಂಕೇತವಾಗಿದೆ. ಆದ್ದರಿಂದ ತಕ್ಷಣ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಲಾಂ ಹೆಸರನ್ನು ತೆಗೆದು, ಕೇವಲ ದೇವರ ಹೆಸರಲ್ಲಿ ಮಹಾಮಂಗಳಾರತಿ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.

ಈ ಹಿನ್ನಲೆಯಲ್ಲಿ ಕ್ಷೇತ್ರದ ವ್ಯವಸ್ಮಾಪನಾ ಸಮಿತಿ ಅಧ್ಯಕ್ಷರಿಗೆ, ಕಾರ್ಯನಿರ್ವಹಣಾಧಿಕಾರಿಗಳಿಗೆ, ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ, ಉಡುಪಿ ಜಿಲ್ಲಾಧಿಕಾರಿಗಳಿಗೆ, ದತ್ತಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿಯವರಿಗೆ ಮನವಿಯನ್ನು ಸಲ್ಲಿಸಲಾಗಿದೆ.

No Comments

Leave A Comment