Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಉಪ ಲೋಕಾಯುಕ್ತರಾಗಿ ನೇಮಕ

ಬೆಂಗಳೂರು ಮಾ 24: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ. ನ್ಯಾಯಮೂರ್ತಿ ಎನ್. ಆನಂದ ಅವರ ನಿವೃತ್ತಿಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಫಣೀಂದ್ರ ಅವರ ನೇಮಕವಾಗಿದೆ.

ಉಪ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್‌. ಆನಂದ್ ಅವರು 2020ರ ಡಿಸೆಂಬರ್ ನಲ್ಲಿ ನಿವೃತ್ತರಾಗಿದ್ದರು. ಬಳಿಕ ಆ ಸ್ಥಾನ ತೆರವಾಗಿತ್ತು. ಇದೀಗ ರಾಜ್ಯ ಸರಕಾರ ಹೊಸ ನೇಮಕ ಮಾಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೇಮಕ ಆದೇಶ ಹೊರಡಿಸಿದ್ದಾರೆ.

2013ರ ಅಕ್ಟೋಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಅವರು, 2016ರ ಮಾರ್ಚ್‌ನಲ್ಲಿ ಪೂರ್ಣಾವಧಿ ನ್ಯಾಯಾಧೀಶರಾಗಿ ಭಡ್ತಿ ಪಡೆದರು. ಮೇ 2020 ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದರು.

1958 ಮಾರ್ಚ್‌ 20 ರಂದು ಜನಿಸಿರುವ ಫಣೀಂದ್ರ ಅವರು ತುಮಕೂರು ಜಿಲ್ಲಾ ಸಿವಿಲ್‌ ಮತ್ತು ಕ್ರಿಮಿನಲ್‌ ನ್ಯಾಯಾಲಯದಲ್ಲಿ1985ರಲ್ಲಿ ನ್ಯಾಯಾವಾದಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. 1998ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ, ಹಾವೇರಿ ಬೆಳಗಾವಿ, ಉಡುಪಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ಕಾರ್ಯದರ್ಶಿಯಾಗಿ, ಬೆಂಗಳೂರು ಮಿಡಿಯೇಷನ್‌ ಕೇಂದ್ರದ ನಿರ್ದೇಶಕರಾಗಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

No Comments

Leave A Comment