ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು, ದೆಹಲಿಯ ಏಮ್ಸ್ ಗೆ ಶಿಫ್ಟ್
ರಾಂಚಿ: ರಾಂಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರನ್ನು ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಲಾಗಿದೆ.
ಮೇವು ಹಗರಣ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ಮುಖ್ಯಸ್ಥರು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ(RIMS) ಬಹು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಮತ್ತು ಒಂದು ತಿಂಗಳೊಳಗೆ ರಾಂಚಿಗೆ ಹಿಂತಿರುಗಬೇಕು ಎಂದು ಜೈಲಿನ ಇನ್ಸ್ ಪೆಕ್ಟರ್ ಜನರಲ್ ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಲಾಲು ಪ್ರಸಾದ್ ಅವರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಶುಕ್ರವಾರ ಅವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ಅವರ ವಯಸ್ಸನ್ನು ಪರಿಗಣಿಸಿ, ಉತ್ತಮ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ನಾವು ಅವರನ್ನು ಏಮ್ಸ್-ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ರಿಮ್ಸ್ ನಿರ್ದೇಶಕ ಡಾ.ಕಾಮೇಶ್ವರ್ ಪ್ರಸಾದ್ ಅವರು ತಿಳಿಸಿದ್ದಾರೆ.
ಇಂದು ಅವರನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ನಾವು ಈಗಾಗಲೇ ಎಐಐಎಂಎಸ್ ನ ತಜ್ಞರೊಂದಿಗೆ ಮಾತನಾಡಿದ್ದೇವೆ. ಪ್ರಸಾದ್ ಅವರನ್ನು ಏಮ್ಸ್-ದೆಹಲಿಗೆ ಸ್ಥಳಾಂತರಿಸಲು ಅಧಿಕಾರಿಗಳು ಮತ್ತು ಅವರ ಕುಟುಂಬ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಪ್ರಸಾದ್ ಅವರ ಪತ್ನಿ ರಾಬ್ರಿ ದೇವಿ, ಮಗಳು ಮಿಸಾ ಭಾರತಿ, ಮಕ್ಕಳಾದ ತೇಜ್ ಪ್ರತಾಪ್ ಮತ್ತು ತೇಜಸ್ವಿ ರಾಂಚಿ ತಲುಪಿ ರಾತ್ರಿ ಅವರನ್ನು ಭೇಟಿಯಾದರು. ತೇಜಸ್ವಿ ತನ್ನ ತಂದೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.