Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಮಂಗಳೂರು: ‘ಕಾಶ್ಮೀರ್ ಫೈಲ್ಸ್‌ನಂತೆ ಗೋಧ್ರಾ ಹತ್ಯಾಕಾಂಡ ಬಗ್ಗೆಯೂ ಸಿನಿಮಾ ತಯಾರಾಗಲಿ’-ಸಿದ್ದರಾಮಯ್ಯ

ಮಂಗಳೂರು :ಮಾ 19,ಕಾಶ್ಮೀರ್ ಫೈಲ್ಸ್‌ನಂತೆ ಗೋಧ್ರಾ ಹತ್ಯಾಕಾಂಡದ ಸತ್ಯಾಸತ್ಯತೆಯ ಬಗ್ಗೆಯೂ ಸಿನೆಮಾ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವ ವಿಚಾರವಾಗಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವುದರ ಬಗ್ಗೆ ಯಾರೂ ಬೇಡ ಎಂದಿಲ್ಲ. ಆದರೆ ನಡೆದ ಸತ್ಯವನ್ನು ಮಾತ್ರ ಜನರಿಗೆ ತೋರಿಸಬೇಕು. ಕಾಶ್ಮೀರದಲ್ಲಿ ಭಯೋತ್ಪಾದಕರು ಏನ್ ಮಾಡಿದರು? ಕಾಶ್ಮೀರಿ ಪಂಡಿತರು ಸೇರಿದಂತೆ ಬೇರೆ ಸಮುದಾಯದವರೊಂದಿಗೆ ಏನೆಲ್ಲಾ ಆಗಿದೆ ಅನ್ನುವುದನ್ನು ತೋರಿಸಬೇಕು. ಅದರ ಜೊತೆಗೆ ಗುಜರಾತ್‌ನಲ್ಲಿ ನಡೆದದ್ದು, ಲಖಿಂಪುರದಲ್ಲಿ ನಡೆದದ್ದು ತೋರಿಸಬೇಕು. ಗೋಧ್ರಾ ಹತ್ಯಾಕಾಂಡದ ಬಗ್ಗೆಯೂ ಒಂದು ಸಿನೆಮಾ ಮಾಡಿ ಜನರಿಗೆ ತೋರಿಸಬೇಕು ಎಂದರು.

ನಾನು ಸಿನೆಮಾ ನೋಡುವುದು ಕಡಿಮೆ. ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಇನ್ನೂ ನೋಡಿಲ್ಲ. ಹಲವು ಸಿನಿಮಾ ನೋಡಿಯೇ ಇಲ್ಲ, ಅದರಂತೆ ಇದನ್ನೂ ನೋಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗುಜರಾತ್ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಗವದ್ಗೀತೆಯ ವಿರೋಧಿ ನಾನಲ್ಲ. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನು ಬೇಕಾದರೂ ಶಾಲೆಯಲ್ಲಿ ಹೇಳಿಕೊಡಲಿ. ಆದರೆ ಮಕ್ಕಳಿಗೆ ನೈತಿಕ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು. ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುವ ಶಿಕ್ಷಣ ನೀಡಬಾರದು ಎಂದು ತಿಳಿಸಿದರು.

ಪಂಚರಾಜ್ಯ ಚುನಾವಣೆಯ ಬಳಿಕ ಕಾಂಗ್ರೆಸ್ ಸಾಫ್ಟ್ ಹಿಂದುತ್ವ ಪ್ರದರ್ಶಿಸುತ್ತಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಮ್ಮಲ್ಲಿ ಸಾಫ್ಟ್ ಅಥವಾ ಹಾರ್ಡ್ ಹಿಂದುತ್ವ ಎಂಬುದಿಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವರು. ಸಂವಿಧಾನ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ನೀಡಿದೆ. ಸಂವಿಧಾನದ ಪ್ರಕಾರವೇ ನಾವು ನಡೆದುಕೊಳ್ಳುತ್ತೇವೆ ಎಂದರು.

ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯದವರು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ಮಾಡಿರುವ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಸಮಾಧಾನವಿದ್ದ ಕಾರಣ ಪ್ರತಿಭಟಿಸಿದರು. ಕೋರ್ಟ್ ನಿರ್ಧಾರ ವಿರೋಧಿಸಬಾರದು. ಎಲ್ಲಾ ಧರ್ಮಗಳು ಕೋಮುವಾದ ಮಾಡದೆ, ಸಮಾನತ್ವದಿಂದ ಬಾಳಬೇಕು ಎಂದು ಮನವಿ ಮಾಡಿದರು.

No Comments

Leave A Comment