ಗೋವಾ ಬಿಜೆಪಿ ಗೊಂದಲಕ್ಕೆ ಕೊನೆಗೂ ತೆರೆ: ಮತ್ತೆ ಸಿಎಂ ಆಗಿ ಪ್ರಮೋದ್ ಸಾವಂತ್ ಆಯ್ಕೆ, ಸದ್ಯದಲ್ಲೆ ಪ್ರಮಾಣ ವಚನ
ಪಣಜಿ: ವಿಧಾನಸಭೆ ಚುನಾವಣೆ ಬಳಿಕ ನಾಯಕತ್ವ ವಿಚಾರದಲ್ಲಿ ಗೋವಾದಲ್ಲಿ ಏರ್ಪಟ್ಟಿದ್ದ ಗೊಂದಲ ಕೊನೆಗೂ ಶಮನವಾಗಿದ್ದು, ಗೋವಾ ಸಿಎಂ ಆಗಿ ಮತ್ತೆ ಪ್ರಮೋದ್ ಸಾವಂತ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತಂತೆ ಎಲ್ಲ ವಿವಾದಗಳಿಗೆ ತೆರೆ ಎಳೆದಿರುವ ಭಾರತೀಯ ಜನತಾ ಪಕ್ಷದ ವಕ್ತಾರ ಶಾಸಕ ಸುಭಾಷ್ ಫಲ್ ದೇಸಾಯಿ ಅವರು ಶನಿವಾರ ಶಾಸಕಾಂಗ ಪಕ್ಷದ ಸಭೆಗೆ ಮುನ್ನ, ‘ರಾಜ್ಯದಲ್ಲಿ ಸರ್ಕಾರವನ್ನು ಪ್ರಮೋದ್ ಸಾವಂತ್ ಅವರು ಮುನ್ನಡೆಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದರಿಂದ ಮುಂದಿನ ಗೋವಾ ಮುಖ್ಯಮಂತ್ರಿಯ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ. ಸಾವಂತ್ ಮತ್ತೆ ಗೋವಾ ಸಿಎಂ ಆಗಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ನಡುವೆಯೇ ದೇಸಾಯಿ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿಯು ಶಿಸ್ತಿನ ಕಾರ್ಯಕರ್ತರ ಪಕ್ಷವಾಗಿದೆ ಎಂದು ಹೇಳಿದ ದೇಸಾಯಿ, “ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ನಿರ್ಧರಿಸಲು ನಮಗೆ ಸಮಯ ಬೇಕಾಗುತ್ತದೆ, ಪ್ರಮೋದ್ ಸಾವಂತ್ ಗೋವಾದ ಮುಖ್ಯಮಂತ್ರಿಯಾಗಲಿದ್ದಾರೆ, ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ. ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಆದಷ್ಟು ಬೇಗ ನಡೆಸಲಾಗುವುದು, ಗೋವಾದಲ್ಲಿ “ಶಿಗ್ಮೋ ಉತ್ಸವ” ಆಚರಿಸುವುದರಿಂದ ಇದು ವಿಳಂಬವಾಗಿದೆ ಎಂದು ಹೇಳಿದರು.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಹೋಳಿ ಜೊತೆಗೆ ಗೋವಾ ಜನತೆಗೆ ಅತ್ಯಂತ ಹತ್ತಿರವಾಗಿರುವ ಶಿಗ್ಮೋತ್ಸವವನ್ನು ಗೋವಾ ಜನರು ಆಚರಿಸುತ್ತಿದ್ದು, ಪಕ್ಷದ ಹೈಕಮಾಂಡ್ ನೀಡುವ ವೇಳಾಪಟ್ಟಿ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅನುಸರಿಸುತ್ತೇವೆ ಎಂದು ದೇಸಾಯಿ ಹೇಳಿದರು