ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್‌ನಲ್ಲಿರುವ ಯೂರೋಪ್‌ನ ಅತಿದೊಡ್ಡ ಪರಮಾಣು ಸ್ಥಾವರ ವಶಪಡಿಸಿಕೊಂಡ ರಷ್ಯಾ ಪಡೆ!
ಕೀವ್: ಉಕ್ರೇನ್‌ನಲ್ಲಿರುವ ಯೂರೊಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ಭೀಕರ ಶೆಲ್ ದಾಳಿ ನಡೆಸಿದ್ದ ರಷ್ಯಾ ಪಡೆ ಇದೀಗ ಸ್ಥಾವರವನ್ನು ವಶಪಡಿಸಿಕೊಂಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇಂದು 9ನೇ ದಿನಕ್ಕೆ ಕಾಲಿಟ್ಟಿದ್ದು ರಷ್ಯಾದ ಒಂದೊಂದೆ ನಗರಗಳನ್ನು ವಶಪಡಿಸಿಕೊಳ್ಳುತ್ತಿರುವ ರಷ್ಯಾ ಪಡೆ ಇದೀಗ ಉಕ್ರೇನ್ ನ ದಕ್ಷಿಣದಲ್ಲಿರುವ ಝೆಪೊರಿಝ್ಝಿಯಾ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಿ ಇದೀಗ ಅದನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ರಷ್ಯಾ ಸೇನೆ ನಾಲ್ಕು ದಿಕ್ಕುಗಳಿಂದಲೂ ಝೆಪೊರಿಝ್ಝಿಯಾ ಅಣುವಿದ್ಯುತ್ ಕೇಂದ್ರದ ಮೇಲೆ ದಾಳಿ ನಡೆಸುತ್ತಿವೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡೈಟ್ರೊ ಕುಲೆಬಾ ಹೇಳಿದ್ದರು.
ಪರಮಾಣು ಸ್ಥಾವರಕ್ಕೆ ಈಗಾಗಲೇ ಬೆಂಕಿ ಹತ್ತಿಕೊಂಡಿದ್ದು, ಇದು ಸ್ಫೋಟಗೊಂಡರೆ ಅದು ಚೆರ್ಲೋಬಿಲ್ ದುರಂತದ ಹತ್ತು ಪಟ್ಟು ದೊಡ್ಡ ಸ್ಫೋಟವಾಗಬಹುದು ಎಂದು ಅವರು ಟ್ವೀಟ್ ಮಾಡಿದ್ದರು.
ರಷ್ಯಾ ಕೂಡಲೇ ಬೆಂಕಿಯನ್ನು ನಂದಿಸಬೇಕು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭದ್ರತಾ ವಲಯವನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು.
ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಅಣುವಿದ್ಯುತ್ ಘಟಕ ಹೊಂದಿರುವ ನಗರದಿಂದ ಏಳುತ್ತಿರುವುದು ವಿಡಿಯೊಗಳಿಂದ ಕಂಡುಬರುತ್ತದೆ. ಈ ನಗರ 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಧ್ವಂಸವಾದ ಕಾರುಗಳಿಂದ ಜನ ಹೊರಬರುತ್ತಿರುವುದು ಕಾಣಿಸುತ್ತಿದೆ. ಈ ಸಂಘರ್ಷ ಉಕ್ರೇನ್‌ನ 15 ಅಣು ರಿಯಾಕ್ಟರ್‌ಗಳಿಗೆ ಆಕಸ್ಮಿಕ ಹಾನಿ ಮಾಡಬಹುದು ಎಂದು ವಿಶ್ವಸಂಸ್ಥೆಯ ಅಣ್ವಸ್ತ್ರ ಕಣ್ಗಾವಲು ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಏತನ್ಮಧ್ಯೆ ಚೆರ್ನಿಹಿವ್‌ನಲ್ಲಿ ರಷ್ಯಾ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 33 ಜನರು ಸಾವಿಗೀಡಾಗಿದ್ದು, 18 ಜನರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಪರಮಾಣು ಸ್ಥಾವರದ ಮೇಲಿನ ದಾಳಿ ನಿಲ್ಲಿಸಬೇಕು: ಉಕ್ರೇನ್
ಉಕ್ರೇನ್‌ನಲ್ಲಿನ ಯುರೋಪ್‌ನ ಅತಿದೊಡ್ಡ ನ್ಯೂಕ್ಲಿಯರ್ ಪವರ್ ಸ್ಟೇಷನ್ ಮೇಲೆ ರಷ್ಯಾ ಸೇನೆ ಶೆಲ್ಲಿಂಗ್ ದಾಳಿ, ಭಾರೀ ಶಸ್ತ್ರಾಸ್ತ್ರ, ಗುಂಡಿನ ದಾಳಿ ನಡೆಸುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಎನರ್ಹೋಡರ್ ಸ್ಥಾವರದ ವಕ್ತಾರ ಆಂಡ್ರಿ ತುಜ್ ಒತ್ತಾಯಿಸಿದ್ದಾರೆ. ಉಕ್ರೇನ್‌ನ ಝಪೊರಿಜ್ಜ್ಯಾ ಪರಮಾಣು ಸ್ಥಾವರದ ಬಳಿ ರಷ್ಯಾದ ಕ್ಷಿಪಣಿ ದಾಳಿಯಿಂದ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಸ್ಥಾವರ ರಕ್ಷಣೆಯಲ್ಲಿದೆ. ಆದರೆ ಅಪಾಯ ಸಂಭವಿಸಿದರೆ ಪರಿಣಾಮ ಭೀಕರವಾಗಿರಲಿದೆ ಎಂದು ಉಕ್ರೇನ್ ಹೇಳಿದೆ.