ಉಕ್ರೇನ್: ಖಾರ್ಕಿವ್ ಪೊಲೀಸ್ ಪ್ರಧಾನ ಕಚೇರಿ ಮೇಲೆ ರಾಕೆಟ್ ದಾಳಿ, 21 ಸಾವು, 112 ಮಂದಿಗೆ ಗಾಯ
ಕೈವ್: ಉಕ್ರೇನ್‌ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಾರ್ಕಿವ್ ನಗರದ ಪೊಲೀಸ್ ಪ್ರಧಾನ ಕಚೇರಿ ಮೇಲೆ ರಷ್ಯಾ ಬುಧವಾರ ರಾಕೆಟ್ ದಾಳಿ ನಡೆಸಿದ್ದು, ನಗರದಲ್ಲಿ ಶೆಲ್ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು 112 ಜನರು ಗಾಯಗೊಂಡಿದ್ದಾರೆ ಎಂದು ನಗರ ಮೇಯರ್ ಹೇಳಿದ್ದಾರೆ.
ಕಟ್ಟಡವು ಬಹುತೇಕ ನಾಶವಾಗಿದೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ದಾಳಿಯ ನಂತರ ಕರಾಜಿನ್ ನ್ಯಾಷನಲ್ ಯೂನಿವರ್ಸಿಟಿಯ ಕಟ್ಟಡವೂ ಬೆಂಕಿಗೆ ಆಹುತಿಯಾಗಿದೆ ಎಂದು ಉಕ್ರೇನ್‌ನ ಆಂತರಿಕ ಸಚಿವರ ಸಲಹೆಗಾರ ಆಂಟನ್ ಗೆರಾಸ್ಚೆಂಕೊ ಹೇಳಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ, ಖಾರ್ಕಿವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಒಲೆಹ್ ಸಿನೆಹುಬೊವ್, ಉಕ್ರೇನಿಯನ್ ರಕ್ಷಣಾ ಸ್ಥಾನಗಳು “ನಿರಂತರವಾಗಿ ಶತ್ರುಗಳ ಗುಂಡಿನ, ವಾಯುಯಾನ, ಜೆಟ್ ಫಿರಂಗಿ ಮತ್ತು ಬಂದೂಕುಗಳ ಪ್ರಭಾವಕ್ಕೆ ಒಳಗಾಗಿವೆ” ಎಂದು ಹೇಳಿದ್ದಾರೆ.
ಉಕ್ರೇನಿಯನ್ ಮಿಲಿಟರಿಯ ಪ್ರಕಾರ, ಖಾರ್ಕಿವ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವೈಮಾನಿಕ ದಾಳಿ ಸೈರನ್‌ಗಳು ಸದ್ದು ಮಾಡಲು ಪ್ರಾರಂಭಿಸುತ್ತಿದ್ದಂತೆಯೇ ವೈಮಾನಿಕ ದಾಳಿ ಪ್ರಾರಂಭವಾಯಿತು. ರಷ್ಯಾದ ಪಡೆಗಳು ಪ್ರಾದೇಶಿಕ ಮಿಲಿಟರಿ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದು, ಹೋರಾಟ ನಡೆಯುತ್ತಿದೆ ಎಂದು ಹೇಳಿಕೆ ನೀಡಿದೆ.