Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಕ್ರೇನ್-ರಷ್ಯಾ ಸಂಘರ್ಷ: ರೊಮೇನಿಯಾ, ಹಂಗೇರಿ ಮೂಲಕ ಭಾರತೀಯರ ಏರ್ ಲಿಫ್ಟ್- ಭಾರತ ಸರ್ಕಾರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಯುದ್ಧ ಪೀಡಿತ ಉಕ್ರೇನ್ ನಲ್ಲಿರುವ ಭಾರತೀಯರ ಸುರಕ್ಷಿತ ವಾಪಸಾತಿಗಾಗಿ ಭಾರತ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ರೊಮೇನಿಯಾ, ಹಂಗೇರಿ ದೇಶಗಳ ಮೂಲಕ ಏರ್ ಲಿಫ್ಟ್ ಕಾರ್ಯಾಚರಣೆಗೆ ನಿರ್ಧರಿಸಿದೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ವಾಪಸಾತಿಗಾಗಿ ಭಾರತ ಸರ್ಕಾರ ಕೆಲಸ ಮಾಡುತ್ತಿದ್ದು, ಭಾರತ ಸರ್ಕಾರ ಮತ್ತು ಹಂಗೇರಿಯಲ್ಲಿರುವ ಅದರ ರಾಯಭಾರ ಕಚೇರಿಯು ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸುವ ಮಾರ್ಗಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಪ್ರಸ್ತುತ, ಏರ್ ಲಿಫ್ಟ್ ತಂಡಗಳು ಉಜ್ಹೋರೋಡ್ ಬಳಿಯ ಹಂಗೇರಿಯನ್ ಗಡಿಯಲ್ಲಿರುವ ಚಾಪ್-ಝಹೋನಿಯಲ್ಲಿ ಮತ್ತು ಚೆರ್ನಿವ್ಟ್ಸಿ ಬಳಿಯ ರೊಮೇನಿಯನ್ ಗಡಿಯಲ್ಲಿ ಪೊರುಬ್ನೆ-ಸಿರೆಟ್‌ನಲ್ಲಿ ಕೇಂದ್ರಗಳ ಸ್ಥಾಪನೆ ಮಾಡುತ್ತಿವೆ ಎನ್ನಲಾಗಿದೆ. ಈ ಕುರಿತು ವಿದೇಶಾಂಗ ಇಲಾಖೆ ಸುತ್ತೋಲೆ ಹೊರಡಿಸಿದ್ದು, ‘ಭಾರತೀಯರು ತಮ್ಮ ಪಾಸ್‌ಪೋರ್ಟ್, ಯುಎಸ್ ಡಾಲರ್‌ಗಳಲ್ಲಿ ನಗದು, ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ತೆಗೆದುಕೊಂಡು ಹೋಗುವಂತೆ ಕೇಳಲಾಗಿದೆ. ಭಾರತೀಯ ಧ್ವಜದ ಪ್ರಿಂಟ್‌ಔಟ್ ತೆಗೆದುಕೊಂಡು ಅದನ್ನು ಅವರು ಪ್ರಯಾಣಿಸಬಹುದಾದ ವಾಹನಗಳು ಅಥವಾ ಬಸ್‌ಗಳಲ್ಲಿ ಪ್ರಮುಖವಾಗಿ ಅಂಟಿಸುವಂತೆ ತಿಳಿಸಲಾಗಿದೆ.

ಅಲ್ಲದೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ತಿಳಿಸಲಾಗಿದ್ದು, ಅಗತ್ಯ ಬಿದ್ದರೆ ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಲಾಗಿದೆ.

ಪ್ರಯಾಣ ವೆಚ್ಚ ಭರಿಸಲಿದೆ ಕೇಂದ್ರ ಸರ್ಕಾರ
ಇದೇ ವೇಳೆ ಉಕ್ರೇನ್ ನಿಂದ ಭಾರತಕ್ಕೆ ವಾಪಸಾಗುವ ಭಾರತೀಯರ ಪ್ರಯಾಣದ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುವುದಾಗಿ ಹೇಳಿದ್ದು, ಈ ಕುರಿತು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

No Comments

Leave A Comment