Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮೇ 3ರಿಂದ ಕಡಿಯಾಳಿ ದೇವಸ್ಥಾನ ಬ್ರಹ್ಮಕಲಶೋತ್ಸವ

ಉಡುಪಿ: ಸುಮಾರು 1,400 ವರ್ಷಗಳ ಇತಿಹಾಸ ಹೊಂದಿರುವ, ಕಣ್ವ ಋಷಿ ಪ್ರತಿಷ್ಠಾಪಿತ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಮೇ 3ರಿಂದ 10ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ ತಿಳಿಸಿದರು.

ಬುಧವಾರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ದೇವಸ್ಥಾನ ಸುತ್ತುಪೌಳಿ, ಹೊರಾಂಗಣ, ಸುಬ್ರಹ್ಮಣ್ಯ ಗುಡಿ, ನಾಗಬನ ಮತ್ತು ನಂದಿಗೋಣ ಗುಡಿ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು.

ಕಳೆದ ವರ್ಷ ಸುಬ್ರಹ್ಮಣ್ಯ ಗುಡಿ, ನಂದಿ ಕೋಣ, ರಕ್ತೇಶ್ವರಿ ಗುಡಿಯಲ್ಲಿ ಪುನರ್ ಪ್ರತಿಷ್ಠೆ ನಡೆಸಲಾಗಿದೆ. ಜನವರಿಯಲ್ಲಿ ಮರದ ಕೆಲಸ ಆರಂಭಗೊಂಡಿದ್ದು, ನಿತ್ಯ 115 ಮಂದಿ ಕುಶಲಕರ್ಮಿಗಳು ಕಾಷ್ಠಶಿಲ್ಪ ರಚನೆಯಲ್ಲಿ ತೊಡಗಿದ್ದಾರೆ.
ಇದೀಗ ದೇವಸ್ಥಾನದ ಶೇ. 65ರಷ್ಟು ಕಾಮಗಾರಿ ಮುಗಿದಿದೆ. ದೇವಸ್ಥಾನದ ಸುತ್ತು ಪೌಳಿಯ ತಾಮ್ರದ ಹೊದಿಕೆಗೆ ಭಕ್ತರ ವಿಶೇಷ ಸಹಕಾರ ಅಗತ್ಯವಿದೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಮಾತನಾಡಿ, ಸುಮಾರು 12 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ದೇಗುಲದ ಒಳಾಂಗಣ, ಸುತ್ತುವಳಿ ಒಳಾಂಗಣ ಗ್ರಾನೈಟ್ ಹೊದಿಕೆ, ಹೊರಾಂಗಣ ರಥಬೀದಿ ಕಾಂಕ್ರಿಟೀಕರಣ ಮತ್ತು ಧ್ವಜಸ್ತಂಭ ಮಹಾ ಬಲಿಪೀಠ ಸೇರಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

ತಳಪಾಯದ ಕೆಲಸವನ್ನು ಸಂಪೂರ್ಣ ಗ್ರಾಮಸ್ಥರೇ ಕರಸೇವೆ ಮೂಲಕ ನಡೆಸಿರುವುದು ಐತಿಹಾಸಿಕ ಎಂದರು.
ಸುದ್ದಿಗೋಷ್ಟಿಯಲ್ಲಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಪವಿತ್ರಪಾಣಿ ಶ್ರೀನಿವಾಸ ಉಪಾಧ್ಯಾಯ ಇದ್ದರು.

ವೆಬ್ ಸೈಟ್ ಬಿಡುಗಡೆ
ಈ ಸಂದರ್ಭದಲ್ಲಿ ದೇವಳದ ವೆಬ್ ಸೈಟ್ ಬಿಡುಗಡೆಗೊಳಿಸಲಾಯಿತು. ವೆಬ್ ಸೊಲ್ಯೂಷನ್ ನ ಶ್ರೀನಿಧಿ ಆಚಾರ್ಯ ಇದ್ದರು

No Comments

Leave A Comment