BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದ ಗಲ್ಲಿಗಲ್ಲಿಯಲ್ಲೂ ಖಾಕಿ ಹದ್ದಿನ ಕಣ್ಣು, ಫೆ.26ರವರೆಗೆ ಕರ್ಫ್ಯೂ ವಿಸ್ತರಣೆ

ಶಿವಮೊಗ್ಗ: ಬರಂಗದಳ ಕಾರ್ಯಕರ್ತನ ಹತ್ಯೆ ನಂತರ ಕಳೆದ 3-4 ದಿನಗಳಿಂದ ನಗರದಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣ ತಹಬದಿಗೆ ಬಂದಿದ್ದು, ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಫೆ.26ರವರೆಗೆ 144 ಸೆಕ್ಷನ್ ಹಾಗೂ ಕರ್ಫ್ಯೂ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಘಟನೆ ಬಳಕ ಉದ್ರಿಕ್ತ ಗುಂಪುಗಳಿಂದ ನಡೆದ ಗಲಭೆ, ದೊಂಬಿ, ಕಲ್ಲುತೂರಾಟದಿಂದಾಗಿ ಶಿವಮೊಗ್ಗ ನಗರ ತಲ್ಲಣಗೊಂಡಿತ್ತು. ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿತ್ತು. ಉದ್ರಿಕ್ತ ಗುಂಪು ಹಲವು ವಾಹನಗಳಿಗೆ ಬೆಂಕಿ ಹಾಕಿದ್ದವು. ಕಳೆದ ಮೂರು ದಿನಗಳಿಂದ ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಪರಿಸ್ಥಿತಿ ಮೇಲ್ನೋಟಕ್ಕೆ ಶಾಂತಿಯುತವಾಗಿ ಕಂಡು ಬರುತ್ತಿದ್ದರೂ ಒಳಗೊಳಗೇ ಆತಂಕ ಮಡುಗಟ್ಟಿದೆ. ಯಾವಾಗ ಇದು ಜ್ವಾಲಾಮುಖಿಯಾಗಿ ಸಿಡಿಯುತ್ತದೆಯೋ ಎಂಬ ಆತಂಕ ವ್ಯಕ್ತವಾಗಿದೆ.

ಶಿವಮೊಗ್ಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭದ್ರತೆಗಾಗಿ ಮೂವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಓರ್ವ ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್‌ಪಿ, 39 ಪೊಲೀಸ್‌ ಇನ್‌ಸ್ಪೆಕ್ಟರ್‌, 54 ಪಿಎಸ್‌ಐ, 48 ಎಎಸ್‌ಐ, 20 ಕೆಎಸ್‌ಆರ್‌ಪಿ ತುಕಡಿ, 10 ಡಿಎಆರ್‌ ತುಕಡಿ ಮತ್ತು 1 ಆರ್‌ಎಎಫ್‌ ತುಕಡಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಶಿವಮೊಗ್ಗದಲ್ಲೇ ಬೀಡುಬಿಟ್ಟಿದ್ದಾರೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಗಲಭೆ ನಡೆದ ಹಳೆ ಶಿವಮೊಗ್ಗ ಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸೀಗೆಹಟ್ಟಿ, ಇಮಾಮ್ ಬಾಡ, ಆಜಾದ್ ನಗರ, ಎಂಕೆಕೆ ರಸ್ತೆ, ಓಟಿ ರಸ್ತೆ, ರವಿವರ್ಮ ಬೀದಿ ಸೇರಿದಂತೆ ಹಲವೆಡೆ ಪೊಲೀಸರು ಬೀಡುಬಿಟ್ಟಿದ್ದಾರೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಆರ್’ಎಎಫ್ ತಂಡವನ್ನು ನಿಯೋಜಿಸಲಾಗಿದೆ.

ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರು, ನಗರದಲ್ಲಿ ಇದೀಗ ಪರಿಸ್ಥಿತಿ ಹತೋಟಿಯಲ್ಲಿದ್ದು, ಅಹಿತಕರ ಘಟನೆ ನಡಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗೆ ಆಸ್ಪದ ನೀಡದಂತ ತಡೆಯಲು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲಿಡಲು ರಾಜಯದ ವಿವಿಧ ಕಡೆಗಳಿಂದ 7 ಡ್ರೋಣ್ ಕ್ಯಾಮೆರಾಗಳನ್ನು ತರಿಸಲಾಗಿದೆ. ನಗರದಲ್ಲಿ ವಿಶೇಷ ಕಟ್ಟೆಚ್ಚರವಹಿಸಲಾಗಿದೆ. ಡ್ರೋಣ್ ಕ್ಯಾಮೆರಾಗಳನ್ನು ನಗರದ ಯಾವ ಭಾಗದಲ್ಲಿ ಬಳಸಬೇಕು ಎನ್ನುವುದನ್ನು ನಂತರ ನಿರ್ಧರಿಸಲಾಗುವುದು. ಈಗ ಪ್ರಯೋಗಿಕವಾಗಿ ಡ್ರೋಣ್ ಹಾರಾಟ ನಡೆಸಲಾಗುತ್ತಿದೆ. ಡ್ರೋಮ್ ಕ್ಯಾಮೆರಾದ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಮತ್ತಿಬ್ಬರು ಆರೋಪಿಗಳ ಬಂಧನ
ಇನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಮತ್ತಿಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಇದರೊಂದಿಗ ಒಟ್ಟು ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಬುಧವಾರ ಬಂಧಕ್ಕೊಳಗಾದ ಆರೋಪಿಗಳನ್ನು ಫರಾಜ್ ಪಾಷಾ (24) ಹಾಗೂ ಅಬ್ದುಲ್ ಖಾದರ್ (25) ಎಂದು ಗುರ್ತಿಸಲಾಗಿದೆ. ಶಿವಮೊಗ್ಗದಲ್ಲಿ ಮೊಕ್ಕಾಂ ಹೂಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಇಬ್ಬರು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನಗರದಲ್ಲಿ ಬುಧವಾರ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ, ಶಾಂತಿಯುತ ವಾತಾವರಣ ಇದ್ದದ್ದು ಕಂಡು ಬಂದಿತ್ತು. ನಗರದ ಮೇಲೆ ಹೆಚ್ಚಿನ ನಿಗಾ ಇರಿಸಲು ಡ್ರೋಣ್’ಗಳನ್ನು ಬಳಸಲಾಗುತ್ತಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಆರ್‌ಎಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹತ್ಯೆಯಿಂದ ಯುವತಿಯರಿಬ್ಬರ ಕರಿನೆರಳು: ಮಾಧ್ಯಮಗಳ ವರದಿ ಈ ನಡುವೆ ಹರ್ಷ ಕೊಲೆಯ ಹಿಂದೆ ಇಬ್ಬರು ಯುವತಿಯರ ಕೈವಾಡ ಇರುವ ಬಗ್ಗೆ ಕೆಲವು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಹರ್ಷ ಕೊಲೆಗೂ ಮೊದಲು ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್ ಬಂದಿತ್ತು. ಸಹಾಯ ಕೇಳುವ ನೆಪದಲ್ಲಿ ಆ ಹುಡುಗಿಯರು ಕಾಲ್ ಮಾಡಿದ್ದರು. ಕೊಲೆಯಾಗುವುದಕ್ಕೂ ಮೊದಲು ಆ ಇಬ್ಬರು ಹುಡುಗಿಯರು ಕರೆ ಮಾಡುತ್ತಿದ್ದರು. ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ ಎಂದು ಕರೆ ಮಾಡಿದ್ದರು. ಅವರ ಸಹಾಯಕ್ಕಾಗಿ ತೆರಳಿದ್ದಾಗ ಅನಾಹುತ ನಡೆದಿದೆ ಎಂದು ಹೇಳಲಾಗುತ್ತಿದೆ.

ಪದೇ ಪದೇ ವಿಡಿಯೋ ಕಾಲ್ ಮಾಡಿದ್ದ ಹುಡುಗಿಯರು ನಾನು ನಿಮಗೆ ಫ್ರೆಂಡ್ ಎಂದು ಹೇಳುತ್ತಿದ್ದರಂತೆ. ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದನಂತೆ. ಇವರು ಯಾರು ಎಂದು ಸ್ನೇಹಿತರನ್ನೂ ಹರ್ಷ ಕೇಳಿದ್ದನಂತೆ. ಯಾರು ಏನೂ ಎಂದು ವಿಚಾರಿಸಿದರೂ ಆ ಹುಡುಗಿಯರು ಉತ್ತರಿಸಿರಲಿಲ್ಲ ಎಂದು ತಿಳಿದುಬಂದಿದೆ. ಬಳಿಕ ನೆರವು ನೀಡಲು ಸ್ನೇಹಿತರ ಜೊತೆ ಹರ್ಷ ತೆರಳಿದ್ದ. ಆಗ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದು ಹೋಗಿತ್ತು ಎಂದು ವರದಿಗಳು ತಿಳಿಸಿವೆ.

ಈ ಮಧ್ಯೆ, ಹರ್ಷನ ಮೊಬೈಲ್ ಪತ್ತೆ ಆಗದಿರುವುದು ನಿಗೂಢವಾಗಿಯೇ ಉಳಿದಿದೆ. ಹರ್ಷನ ಮೊಬೈಲ್ ಎಲ್ಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಹರ್ಷನ ಮೊಬೈಲ್ ಆರೋಪಿಗಳ ಬಳಿ ಇದೆಯೇ? ಹುಡುಗಿಯರನ್ನು ಕೊಲೆಗೆ ಬಳಸಿಕೊಂಡರೇ ಆರೋಪಿಗಳು? ಸಹಾಯ ಕೇಳುವ ನೆಪದಲ್ಲಿ ಕರೆ ಮಾಡಿದ್ದರಾ ಆ ಹುಡುಗಿಯರು? ಎಂಬೆಲ್ಲಾ ಪ್ರಶ್ನೆಗಳು ಮೂಡತೊಡಗಿದ್ದು, ಹರ್ಷನ ಆಪ್ತ ಸ್ನೇಹಿತನ ಮಾತಲ್ಲಿ ಈ ಮಾಹಿತಿ ಹೊರಬಂದಿದೆ. ಆದರೆ, ಪೊಲೀಸರು ಈ ಕುರಿತು ಯಾವುದೇ ಸ್ಪಷ್ಟನೆಗಳನ್ನೂ ನೀಡಿಲ್ಲ.

ವಿಡಿಯೋ ಕರೆಗಳನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಲು ಸಾಧ್ಯವಿಲ್ಲ. ಆದರೆ ಹರ್ಷ ಅವರ ಫೋನ್ ಕಾಣೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ಅವರು ಹೇಳಿದ್ದಾರೆ.

No Comments

Leave A Comment