ಹಿಜಾಬ್ ವಿವಾದ: ಬೆಂಗಳೂರಿನಲ್ಲಿ ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯುವಂತೆ ಸೂಚಿಸಿದ ಕಾಲೇಜು
ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಆದೇಶದ ಪ್ರಕಾರ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಉಡುಪು ಧರಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಲೇಜ್ ವೊಂದು ಟರ್ಬನ್(ದಸ್ತಾರ್) ಧರಿಸಿ ಬಂದ 17 ವರ್ಷದ ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯುವಂತೆ ಸೂಚನೆ ನೀಡಿದೆ ಮತ್ತು ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿನಿಗೆ ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ತಿಳಿ ಹೇಳಿದ್ದಾರೆ.
ಫೆಬ್ರವರಿ 16 ರಂದು ತರಗತಿಗಳು ಪುನರಾರಂಭಗೊಂಡಾಗ ನ್ಯಾಯಾಲಯದ ಆದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ್ದೇವೆ ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಈ ವಾರದ ಆರಂಭದಲ್ಲಿ ಕಾಲೇಜಿಗೆ ಭೇಟಿ ನೀಡಿದಾಗ, ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದನ್ನು ನೋಡಿ, ನ್ಯಾಯಾಲಯದ ಆದೇಶದ ಬಗ್ಗೆ ಅವರಿಗೆ ತಿಳಿಸಿ ಮತ್ತು ಅದನ್ನು ಪಾಲಿಸುವಂತೆ ಹೇಳಿದ್ದರು.
ನಂತರ ಕಾಲೇಜು ಆಡಳಿತ ಮಂಡಳಿ ಸಿಖ್ ವಿದ್ಯಾರ್ಥಿನಿಯ ತಂದೆಯೊಂದಿಗೆ ಸಂಪರ್ಕ ಸಾಧಿಸಿ ನ್ಯಾಯಾಲಯದ ಆದೇಶ ಮತ್ತು ಅದನ್ನು ಪಾಲಿಸುವ ಅಗತ್ಯತೆಯ ಬಗ್ಗೆ ತಿಳಿಸಿತ್ತು.
ಮೂಲಗಳ ಪ್ರಕಾರ, ವಿದ್ಯಾರ್ಥಿನಯ ಕುಟುಂಬವು ತಮ್ಮ ಮಗಳು ಟರ್ಬನ್ ತೆಗೆಯುವುದಿಲ್ಲ ಎಂಬ ನಿಲುವು ಹೊಂದಿದ್ದು, ಮಗಳು ಅಮೃತಧಾರಿ ಸಿಖ್ ಆಗಿರೋದರಿಂದ ಆಕೆ ಟರ್ಬನ್ ತೆಗೆಯಲು ಒಪ್ಪಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಕಾನೂನು ಸಲಹೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ.