ಮೇವು ಹಗರಣ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ ಕೋರ್ಟ್
ರಾಂಚಿ: ಬಹುಕೋಟಿ ರೂಪಾಯಿ ಮೇವು ಹಗರಣದ ದೋಷಿ ಎಂದು ಸಾಬೀತಾಗಿದ್ದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ 5 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಮೇವು ಹಗರಣದ 139 ಕೋಟಿ ರೂಪಾಯಿ ಡೊರಾಂಡಾ ಖಜಾನೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ತಪ್ಪಿತಸ್ಥ ಎಂದು ಈ ಹಿಂದೆ ಸಿಬಿಐ ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಮಾಣ ಘೋಷಣೆ ಮಾಡಿದ್ದು, ಲಾಲ್ ಪ್ರಸಾದ್ ಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌ಕೆ ಶಶಿ ಅವರು 6 ಮಹಿಳೆಯರು ಸೇರಿದಂತೆ 24 ಆರೋಪಿಗಳನ್ನು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಖುಲಾಸೆಗೊಳಿಸಲಾಗಿತ್ತು. ಲಾಲೂ ಪ್ರಸಾದ್ ಯಾದವ್ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18 ರಂದು ಘೋಷಿಸಲಾಗುವುದು ಎಂದು ನ್ಯಾಯಾಲಯ ಇಂದು ತೀರ್ಪು ವೇಳೆ ಪ್ರಕಟಿಸಿತ್ತು. ಶಿಕ್ಷೆಯ ಪ್ರಮಾಣದ ಬಗ್ಗೆ ವಾಸ್ತವಿಕವಾಗಿ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಈ ಶಿಕ್ಷೆಯನ್ನು ಘೋಷಿಸಿತು.
ಫೆಬ್ರವರಿ 15 ರಂದು ಪ್ರಕರಣದಲ್ಲಿ ಶಿಕ್ಷೆಯ ನಂತರ, ಅನಾರೋಗ್ಯದಿಂದ ಬಳಲುತ್ತಿರುವ 73 ವರ್ಷದ ಬಿಹಾರದ ಮಾಜಿ ಮುಖ್ಯಮಂತ್ರಿಯನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ನಂತರ ಅನಾರೋಗ್ಯ ಕಾರಣದಿಂದಾಗಿ ರಾಂಚಿಯ ಸರ್ಕಾರಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಗೆ ಸ್ಥಳಾಂತರಿಸಲಾಯಿತು.