Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಕಗ್ಗೊಲೆ: ಬೆಚ್ಚಿಬಿದ್ದ ಮಲೆನಾಡು, ಸ್ಥಳದಲ್ಲಿ ಬಿಗುವಿನ ವಾತಾವರಣ, ಶಾಲಾ-ಕಾಲೇಜುಗಳಿಗೆ ರಜೆ

ಶಿವಮೊಗ್ಗ: ಹಿಜಾಬ್ ವಿವಾದದಿಂದ ಸುದ್ದಿಯಾಗಿದ್ದ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಭಜರಂಗದಳದ ಕಾರ್ಯಕರ್ತನ ಭೀಕರ ಹತ್ಯೆಯಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯಲ್ಲಿಯೇ ಘಟನೆ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಕಳೆದ ರಾತ್ರಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ನಡೆದಿದೆ. ಪರಿಣಾಮ, ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ(ಸಿಆರ್‌ಪಿಸಿ ಸೆಕ್ಷನ್‌ 144) ಜಾರಿಗೊಳಿಸಲಾಗಿದೆ. ಕಳೆದ ರಾತ್ರಿ 9 ಗಂಟೆಯ ಸುಮಾರಿಗೆ ಹರ್ಷ ಎಂಬಾತನನ್ನು ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಚುಚ್ಚಿ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಯುವಕನನ್ನು ತಕ್ಷಣ ದಾಖಲಾಯಿಸಿತಾದರೂ ಅಷ್ಟೊತ್ತಿಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.  ಸಾವಿರಾರು ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಕಳೆದ ರಾತ್ರಿ ಆಗಿದ್ದೇನು?: ನಿನ್ನೆ ಭಾನುವಾರ ರಾತ್ರಿ 10 ಗಂಟೆ ಸುಮಾರು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆ ಶಿವಮೊಗ್ಗದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಭಾರತಿ ಕಾಲೊನಿ ಬಡಾವಣೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದರು.

ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಭಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ. ಕೂಡಲೇ ಯುವಕನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿಸಿತಾದರೂ ಚಿಕಿತ್ಸೆ ಫಲಿಸದೇ ಹರ್ಷ ಪ್ರಾಣಬಿಟ್ಟಿದ್ದಾನೆ.

ಸೀಗೆಹಟ್ಟಿಯಲ್ಲಿ ಕಲ್ಲು ತೂರಾಟ‌: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಸದ್ಯ ಬಿಗುವಿನ ವಾತಾವರಣವಿದೆ. ಸೀಗೆಹಟ್ಟಿ‌ ಭಾಗದಲ್ಲಿ ಕಲ್ಲು ತೂರಾಟ ನಡೆಯುತ್ತಿದ್ದು, ಸ್ಥಳಕ್ಕೆ ಪೂರ್ವ ವಲಯ ಡಿಐಜಿ ತ್ಯಾಗರಾಜನ್ ಹಾಗೂ ಎಸ್​ಪಿ ಲಕ್ಷ್ಮಿಪ್ರಸಾದ್ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಯಾವುದೇ ಆಹಿತಕರ ಘಟನೆ ನಡೆಯದಂತೆ ಬೇರೆ ಜಿಲ್ಲೆಗಳಿಂದಲೂ ಹೆಚ್ಚಿ‌ನ ಪೊಲೀಸ್ ಸಿಬ್ಬಂದಿ ಕರೆಯಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಮತ್ತೊಂದೆಡೆ ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಭಜರಂಗದಳದ ಕಾರ್ಯಕರ್ತನ ಕೊಲೆ ಸುದ್ದಿ ಮಲೆನಾಡಿನಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳಕ್ಕೆ ಎಸ್​ಪಿ ಲಕ್ಷ್ಮಿಪ್ರಸಾದ್ ಮತ್ತು ಡಿಸಿ ಡಾ. ಸೆಲ್ವಮಣಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಂದು ಶಿವಮೊಗ್ಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು. ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಯಾರೂ ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

No Comments

Leave A Comment