ಹಿಜಾಬ್ ವಿವಾದ: ಬೆಳಗಾವಿಯ ಪ್ಯಾರಾಮೆಡಿಕಲ್ ಕಾಲೇಜಿಗೆ ರಜೆ ಘೋಷಣೆ; ರಾಜ್ಯದ ಹಲವು ಕಾಲೇಜುಗಳಲ್ಲಿ ಬಿಗುವಿನ ವಾತಾವರಣ
ಬೆಳಗಾವಿ: ಹಿಜಾಬ್ ವಿವಾದ ರಾಜ್ಯದ ಬಹುತೇಕ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಭುಗಿಲೆದ್ದಿದೆ. ಬೆಳಗಾವಿಯ ವಿಜಯ ಪ್ಯಾರಾಮೆಡಿಕಲ್ ಕಾಲೇಜು ಮುಂದೆ ಇಂದು ಶನಿವಾರ ಭಾರಿ ಹೈಡ್ರಾಮಾ ನಡೆಯಿತು.
ಜಿಲ್ಲಾಡಳಿತ, ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ವಿದ್ಯಾರ್ಥಿನಿಯರ ಮನವೊಲಿಸಲು ಸಾಧ್ಯವಾಗಲಿಲ್ಲ. ಹಿಜಾಬ್ಗೆ ಅನುಮತಿ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಹಿಜಾಬ್ ಧರಿಸಿಯೇ(Hijab row) ನಾವು ತರಗತಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹಠಬಿದ್ದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯಬೇಕೆಂದು ಪ್ರಾಂಶುಪಾಲರು ಮನವಿ ಮಾಡಿದರು. ಆದರೆ ಹಿಜಾಬ್ ತೆಗೆಯುವುದಕ್ಕೆ ವಿದ್ಯಾರ್ಥಿನಿಯರು ಒಪ್ಪಲಿಲ್ಲ.
ಕಳೆದ ಮೂರು ದಿನಗಳಿಂದ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಮತ್ತು ಬುರ್ಖಾ ಧರಿಸಿಕೊಂಡು ಬರುತ್ತಿದ್ದಾರೆ, ತರಗತಿಯೊಳಗೆ ಬರುವಾಗ ಬುರ್ಖಾ, ಹಿಜಾಬ್ ತೆಗೆದು ಬನ್ನಿ ಎಂದು ಕಾಲೇಜು ಆಡಳಿತ ಮಂಡಳಿ ಎಷ್ಟೇ ಕೇಳಿಕೊಂಡರೂ ಒಪ್ಪುತ್ತಿರಲಿಲ್ಲ.
ಕಾಲೇಜಿಗೆ ರಜೆ ನೀಡಲು ಜಿಲ್ಲಾಡಳಿತ ಸೂಚನೆ: ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ವಿವಾದವು ಉಲ್ಬಣಗೊಳ್ಳಲು ಪ್ರಾರಂಭಿಸಿದಾಗ, ಬೆಳಗಾವಿಯ ಜಿಲ್ಲಾಧಿಕಾರಿಗಳು ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಸಂಸ್ಥೆಯನ್ನು ಮುಚ್ಚುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದ್ದಾರೆ. ಶನಿವಾರ ಸಂಸ್ಥೆ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ಇಚ್ಛಿಸದ ವಿದ್ಯಾರ್ಥಿನಿಯರ ಗುಂಪು ಹಿಜಾಬ್ ಮತ್ತು ಬುರ್ಖಾವನ್ನು ಧರಿಸಿ ಮತ್ತೆ ಕಾಲೇಜಿಗೆ ಬಂದ ನಂತರ ಸಂಸ್ಥೆಗೆ ಅನಿರ್ದಿಷ್ಟ ರಜೆ ಘೋಷಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಇಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವರ ಪೋಷಕರು ಬೆಂಗಾವಲಾಗಿ ನಿಂತಿದ್ದಾರೆ. ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿಯರ ಬೇಡಿಕೆಯಾಗಿದೆ.
ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕು, ಹಾಗೆಂದು ಹಿಜಾಬ್ ಇಲ್ಲದೆ ಶಿಕ್ಷಣ ಬೇಡ ಎಂದು ವಿದ್ಯಾರ್ಥಿನಿಯರು ಹಠಹಿಡಿದಿದ್ದಾರೆ. ಎರಡು ದಿನಗಳ ಹಿಂದೆ, ಹಿಜಾಬ್ ಧರಿಸಿದ ಹುಡುಗಿಯರನ್ನು ತರಗತಿಯೊಳಗೆ ಬಿಡುವಂತೆ ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರ ಮೇಲೆ ಒತ್ತಡ ಹೇರಲು ಯತ್ನಿಸಿದಾಗ ಬೆಳಗಾವಿ ಪೊಲೀಸರು ಆರು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು.
ಬೆಳಗಾವಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಮಾತನಾಡಿ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತ ಯುವಕರ ಗುಂಪು ಕ್ಯಾಂಪಸ್ನಲ್ಲಿ ಗಲಭೆ ಸೃಷ್ಟಿಸುತ್ತಿದ್ದು, ಹೀಗಾಗಿ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಬೇಕಾಯಿತು. ಬಳಿಕ ಅವರೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಸಮವಸ್ತ್ರ ಧರಿಸದೇ ಇದ್ದರೆ, ಮೊಬೈಲ್ ಬಳಸಿದರೆ ದಂಡ: ಸಮವಸ್ತ್ರ ಧರಿಸದೆ ಬಂದರೆ 200 ರೂಪಾಯಿ ದಂಡ ಪಾವತಿಸಬೇಕು, ಮೊಬೈಲ್ ನ್ನು ಕೂಡ ಬಳಸುವಂತಿಲ್ಲ ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಕಾಲೇಜು ಆಡಳಿತ ಮಂಡಳಿ ನೋಟೀಸ್ ಹಾಕಿದೆ.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾಲ್ವರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿ ವಾಂಟ್ ಜಸ್ಟೀಸ್ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್ ಮತ್ತು ಶಿಕ್ಷಣ ನಮಗೆ ಅಪ್ಪಅಮ್ಮನಂತೆ. ಇಬ್ಬರನ್ನೂ ಬಿಡಲು ನಮಗೆ ಆಗುವುದಿಲ್ಲ. ನಾವು ದೇವರನ್ನು ಬಿಟ್ಟು ಇನ್ನಾರಿಗೂ ಹೆದರುವುದಿಲ್ಲ. ಎಷ್ಟು ದಿನ ಅಂತ ಹೈಕೋರ್ಟ್ ಆದೇಶಕ್ಕೆ ನಾವು ಕಾಯಬೇಕು ಅಂತ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ. ಕಾಲೇಜು ಬಳಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿ: ಹಿಜಾಬ್ ವಿವಾದ ಮತ್ತಷ್ಟು ಭುಗಿಲೇಳುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 26 ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.