BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

‘ಹಿಜಾಬ್ ಧರಿಸುವುದು ನಮ್ಮ ಮಾನ-ಮರ್ಯಾದೆ, ಅದನ್ನು ತೆಗೆದರೆ ನಮ್ಮ ಮಾನ ತೆಗೆದಂತೆ’: ಮುಸ್ಲಿಂ ವಿದ್ಯಾರ್ಥಿನಿಯರ ಆಕ್ರೋಶ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದ (Hijab row) ತಣ್ಣಗಾಗುತ್ತಲೇ ಇಲ್ಲ, ಮತ್ತಷ್ಟು ಹೆಚ್ಚಾಗುತ್ತಿದೆ. ನಿನ್ನೆ ಕಾಲೇಜು ಪುನಾರಂಭವಾದ ದಿನ ಶಿವಮೊಗ್ಗ, ಬಳ್ಳಾರಿ, ಮಂಡ್ಯ, ಹುಬ್ಬಳ್ಳಿ, ರಾಮನಗರ, ತುಮಕೂರು ಕಲಬುರಗಿ, ರಾಯಚೂರು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹೀಗೆ ಬಹುತೇಕ ಜಿಲ್ಲೆಗಳಲ್ಲಿ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕೆ ಕಾಲೇಜುವರೆಗೆ ಹೋಗಿ ಅಧ್ಯಾಪಕರು, ಕಾಲೇಜು ಆಡಳಿತ ಮಂಡಳಿ ವಿರುದ್ಧ ವಾಗ್ವಾದ ನಡೆಸಿ ಮನೆಗೆ ವಾಪಸ್ ಆದ ಪ್ರಸಂಗ ನಡೆಯಿತು.

ಇಂದು ಗುರುವಾರ ವಿವಾದ ಮತ್ತಷ್ಟು ಭುಗಿಲೆದ್ದಿದೆ. ನಮಗೆ ಶಿಕ್ಷಣ ಬೇಕು, ಹಿಜಾಬ್ ಕೂಡ ಬೇಕು, ನಾವು ಹಿಜಾಬ್ ಧರಿಸುವುದು ನಮ್ಮ ಸುರಕ್ಷತೆಗೆ, ನಮ್ಮ ದೇಶವನ್ನು, ಕಾನೂನನ್ನು ಗೌರವಿಸುತ್ತೇವೆ. ಆದರೆ ಹಿಜಾಬ್ ನ್ನು ತೆಗೆಯಲು ಸಾಧ್ಯವೇ ಇಲ್ಲ, ಹಿಜಾಬ್ ತೆಗೆದರೆ ನಮ್ಮ ಮಾನ ತೆಗೆದಂತೆ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಸರ್ಕಾರ ವಿರುದ್ಧ, ರಾಜಕೀಯ ನಾಯಕರು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರ ವಾದ-ವಿವಾದ ತಾರಕಕ್ಕೇರಿದೆ. ಹಿಂದೂ ಧರ್ಮದ ಹುಡುಗಿಯರು ಬಿಂದಿ,ಕುಂಕುಮ, ಕೈಬಳೆ ಹಾಕಿಕೊಂಡು ಬರುತ್ತಾರೆ, ನಾವು ಅದನ್ನು ವಿರೋಧಿಸುತ್ತಿಲ್ಲ, ನಾವು ಅದನ್ನು ಯಾಕೆ ಹಾಕಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿಲ್ಲ, ನಮಗೆ ಬೇರೆ ಧರ್ಮಕ್ಕೆ ಯಾವ ರೀತಿ ಗೌರವ ನೀಡಬೇಕೆಂದು ಗೊತ್ತಿದೆ. ನಮ್ಮ ಅಪ್ಪ-ಅಮ್ಮ ಒಳ್ಳೆಯ ಬುದ್ದಿ ಹೇಳಿಕೊಟ್ಟಿದ್ದಾರೆ, ಪ್ರತಿಯೊಂದು ಧರ್ಮದಲ್ಲಿ ಆಯಾ ಧರ್ಮಗಳ ರೀತಿ-ರಿವಾಜುಗಳು ಮುಖ್ಯವಾಗುತ್ತದೆ, ನಾವು ಹಿಜಾಬ್ ಹಾಕಿಕೊಂಡು ಬಂದರೆ ಯಾಕೆ ವಿರೋಧ ಎಂದು ವಿದ್ಯಾರ್ಥಿನಿ ನೂರ್ ಫಾತಿಮಾ ಆಕ್ರೋಶ ಭರಿತಳಾಗಿ ಪ್ರಶ್ನಿಸಿದ್ದಾಳೆ.

ನಾವು ಎಲ್ ಕೆಜಿ-ಯುಕೆಜಿಯಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವೆ, ನಮ್ಮ ತಾತ-ಮುತ್ತಾತಂದಿರ ಕಾಲದಿಂದ ಹಾಕಿಕೊಂಡು ಬರುತ್ತಿದ್ದೇವೆ. ನಾವು ಸಾಯುವವರೆಗೆ ಹಾಕುತ್ತೇವೆ, ಸತ್ತ ನಂತರ ಅದನ್ನು ಮುಚ್ಚಿಯೇ ಕಳುಹಿಸುತ್ತಾರೆ. ಈಗ ತೆಗೆಯಿರಿ ಎಂದರೆ ನಮ್ಮ ಮಾನ ಹರಾಜು ಹಾಕಿದಂತೆ ಎಂದಳು.

ಹಿಜಾಬ್ ಹಾಗೂ ಬುರ್ಕಾ ತೆಗೆಯಬೇಕು ಅಂದರೆ ನಮಗೆ ಶಿಕ್ಷಣವೇ ಬೇಡ. ನಾವು ಹಿಜಾಬ್ ತೆಗೆಯಬೇಕೆಂದರೆ ಹಿಂದೂಗಳು ಕೂಡ ಕುಂಕುಮ ಇಟ್ಟುಕೊಂಡು ಬರುವಂತಿಲ್ಲ ಎಂದು ವಿದ್ಯಾರ್ಥಿನಿ ರುಸೈನಾ ಕೌಸರ್ ಹೇಳಿದ್ದಾಳೆ. ಬುರ್ಕಾ ಇದ್ರೆ ನಮಗೆ ಸೇಪ್ಟೀ, ನಮ್ಮ ಪೋಷಕರು ಬುರ್ಕಾ ಇದೆ ಅನ್ನೋ ಕಾರಣಕ್ಕೆ ಕಾಲೇಜ್​ಗೆ ಕಳಿಸುತ್ತಿದ್ದಾರೆ. ಕೋರ್ಟ್ ಆದೇಶ ಹಿಜಾಬ್ ತೆಗೆಯಬೇಕೆಂದರೆ ನಾವು ಹೋರಾಟ ಮಾಡುತ್ತೇವೆ. ಪಾಕಿಸ್ತಾನಕ್ಕೆ ಹೋಗಿ ಎಂದು ಕೆಲವರು ಹೇಳ್ತಾರೆ, ಆದರೆ ನಾವು ಇಂಡಿಯನ್ಸ್ ನಾವು ಹೋಗೋದಿಲ್ಲ ಅವರೆ ಬೇಕಾದ್ರೆ ಹೋಗಲಿ ಎಂದು ಕೋಪದಿಂದ ಮಾತನಾಡಿದ್ದಾಳೆ.

ಈ ಮಧ್ಯೆ ಹೈಕೋರ್ಟ್ ನ ಮಧ್ಯಂತರ ಆದೇಶಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಡೋಂಟ್ ಕೇರ್ ಅನ್ನುತ್ತಿದ್ದಾರೆ. ವಿದ್ಯಾರ್ಥಿನಿಯರ ಜೊತೆ ಹಲವೆಡೆ ಪೋಷಕರೂ ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟು ದಿನ ಇಲ್ಲದ ಹಿಜಾಬ್ ಗಲಾಟೆ ಈಗ್ಯಾಕೆ ಎಂದು ವಿದ್ಯಾರ್ಥಿನಿಯರು ಕೇಳುತ್ತಿದ್ದಾರೆ. ಸೂಕ್ಷ್ಮ ಕಾಲೇಜುಗಳ ಮುಂದೆ ಸೆಕ್ಷನ್ 144 ಜಾರಿಯಲ್ಲಿದ್ದರೂ ವಿದ್ಯಾರ್ಥಿಗಳು-ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಹಿಜಾಬ್ ನಿಷೇಧಿಸಿದವರ ಮನೆ ಹಾಳಾಗಿ ಹೋಗಲಿ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಹಿಜಾಬ್ ತೆಗೆಯಲ್ಲ: ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ನಾವು ಕ್ಲಾಸಿಗೆ ಹೋಗುವುದಿಲ್ಲ, ನಮ್ಮ ಮುಂದಿನ ಜನಾಂಗಕ್ಕೂ ಹಿಜಾಬ್ ಮುಂದುವರಿಯಬೇಕು, ಕೋರ್ಟ್ ಆದೇಶ ನಮ್ಮ ಪರವಾಗಿ ಬರುತ್ತದೆ ಎಂಬ ವಿಶ್ವಾಸವಿದೆ, ಸರ್ಕಾರ ಕೂಡ ನ್ಯಾಯ ಕೊಡುತ್ತದೆ ಎಂಬ ನಂಬಿಕೆಯಿದೆ ಎಂದು ವಿದ್ಯಾರ್ಥಿನಿಯರು ಹೇಳುತ್ತಾರೆ. ಕೋರ್ಟ್ ಇನ್ನೂ ಅಂತಿಮ ಆದೇಶ ನೀಡಿಲ್ಲ, ಅಂತಿಮ ಆದೇಶ ಬರುವವರೆಗೆ ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ರಾಜಕೀಯ ನಾಯಕರಿಂದ ಸ್ವಾರ್ಥ ರಾಜಕಾರಣ: ಚುನಾವಣೆ ಹತ್ತಿರ ಬರುತ್ತಿದೆ.ಅದಕ್ಕಾಗಿ ಹಿಜಾಬ್ ವಿಷಯ ಹಿಡಿದುಕೊಂಡು ರಾಜಕಾರಣಿಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ನಮ್ಮಂಥ ಮುಗ್ಧ ವಿದ್ಯಾರ್ಥಿನಿಯರನ್ನು ಬಲಿಪಶು ಮಾಡುತ್ತಿದ್ದಾರೆ ಎನ್ನುತ್ತಾರೆ.

ಹಿಜಾಬ್ ತೆಗೆದು ಕಾಲೇಜಿಗೆ ಬರುವಂತೆ ಉಪನ್ಯಾಸಕರು ಮನವಿ ಮಾಡಿಕೊಂಡರು, ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿರುವಂತಹ ಘಟನೆ ಯಾದಗಿರಿ ಸಿಟಿ ನ್ಯೂ ಕನ್ನಡ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದೆ.

ಕಣ್ಣೀರು ಹಾಕಿದ ಗ್ರಂಥಪಾಲಕಿ: ಕಾಲೇಜಿಗೆ ಬುರ್ಖಾ, ಹಿಜಾಬ್ ಧರಿಸಿಕೊಂಡು ಬಂದ ಮುಸ್ಲಿಂ ಗ್ರಂಥಪಾಲಕಿಗೆ ಗೇಟ್ ಬಳಿ ಹಿಜಾಬ್ ತೆಗೆಯಿರಿ ಎಂದು ಹೇಳಿದ್ದಕ್ಕೆ ಗ್ರಂಥಪಾಲಕಿ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

ಈ ಮಧ್ಯೆ ವಿವಾದದ ಬಗ್ಗೆ ನಿನ್ನೆ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗಿದೆ. ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ. ಇಂದು ಮಧ್ಯಾಹ್ನ 2.30ಕ್ಕೆ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ.

No Comments

Leave A Comment