ಐಪಿಎಲ್ 2022 ಹರಾಜು: 12.25 ಕೋಟಿ ರೂ. ಗೆ ಶ್ರೇಯಸ್ ಅಯ್ಯರ್ ಕೆಕೆಆರ್ ತೆಕ್ಕೆಗೆ; ಫಾಫ್ ಡುಪ್ಲೆಸಿಸ್ ಆರ್ ಸಿಬಿಗೆ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, 12.25 ಕೋಟಿ ರೂ. ಗೆ ಶ್ರೇಯಸ್ ಅಯ್ಯರ್ ಕೆಕೆಆರ್ ತೆಕ್ಕೆಗೆ ಜಾರಿದ್ದು, 7 ಕೋಟಿ ಬಿಡ್ ಮಾಡಿ ಫಾಫ್ ಡುಪ್ಲೆಸಿಸ್ ರನ್ನು ಆರ್ ಸಿಬಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಹೌದು.. 15ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಬಿಡ್ ಮಾಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ವಿಶೇಷವೆಂದರೆ ಎರಡು ಹೊಸ ತಂಡಗಳು ಟೂರ್ನಿಗೆ ಸೇರ್ಪಡೆಯಾಗಿದ್ದು, ಆಟಗಾರರಿಗೆ ಅವಕಾಶಗಳು ವಿಫುಲವಾಗಿಯೇ ದೊರೆಯಲಿದೆ.
ಈ ಹಿಂದೆ ಫ್ರಾಂಚೈಸಿಗಳು ತಮ್ಮ ತಮ್ಮ ತಂಡದಿಂದ ಬಿಡುಗಡೆ ಮಾಡಿದ್ದ ಮತ್ತು ಐಪಿಎಲ್ ಗೆ ನೋಂದಾಯಿಸಿಕೊಂಡಿದ್ದ ನೂರಾರು ಆಟಗಾರರನ್ನು ಬಿಡ್ಡಿಂಗ್ ಹಾಕಲಾಗಿದ್ದು, ಈಗಾಗಲೇ ಸಾಕಷ್ಟು ಆಟಗಾರರು ದುಬಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.
ಈ ಪೈಕಿ ಭಾರತ ತಂಡದ ಆಟಗಾದ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಜ 12.25 ಕೋಟಿ ರೂ ಬಿಡ್ ಮಾಡಿ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಅಯ್ಯರ್ ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ತಂಡಗಳ ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಕೆಕೆಆರ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಫಾಫ್ ಡುಪ್ಲೆಸಿಸ್ ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಕೋಟಿ ಬಿಡ್ ಮಾಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಡ್ವೇನ್ ಬ್ರಾವೊ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 4.40 ಕೋಟಿ ರೂ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.