ಮಂಗಳೂರು: ಖಾಸಗಿ ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧವಿಲ್ಲ, ಶುಕ್ರವಾರ ಪ್ರಾರ್ಥನೆಗೂ ಅವಕಾಶ!
ಮಂಗಳೂರು: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೋಮು ಸೂಕ್ಷ್ಮವಾಗಿರುವ ಮಂಗಳೂರಿನ ಹಲವು ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್‌ನಲ್ಲಿ ಮತ್ತು ತರಗತಿಯಲ್ಲಿ ಸ್ಕಾರ್ಫ್ ಧರಿಸಲು ಅವಕಾಶ ನೀಡಲಾಗುತ್ತಿದೆ.
ಮುಸ್ಲಿಂಯೇತರರು ನಡೆಸುತ್ತಿರುವ ಕಾಲೇಜುಗಳು ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಕೇವಲ ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಮಾತ್ರವಲ್ಲ, ತರಗತಿ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡುವುದರೊಂದಿಗೆ ಮಸೀದಿಗಳಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಅವರಿಗೆ ಅವಕಾಶವನ್ನು ನೀಡಿರುವುದು ಟಿಎನ್ ಐಇ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ತಿಳಿದುಬಂದಿದೆ.
ಆರ್ ಎಸ್ ಎಸ್, ಬಿಜೆಪಿ ಪದಾಧಿಕಾರಿಗಳ ಕಾಲೇಜುಗಳಲ್ಲಿಯೂ ಹಿಜಾಬ್ ಗೆ ಅವಕಾಶ: ರಾಷ್ಟ್ರೀಯ ಸ್ವಯಂ ಸೇವಕ ಮತ್ತು ಬಿಜೆಪಿ ಪದಾಧಿಕಾರಿಗಳಿಗೆ ಸೇರಿದ ಕಾಲೇಜುಗಳಲ್ಲಿಯೂ ಈ ರೀತಿ ನಡೆಯುತ್ತಿರುವುದು ಅಚ್ಚರಿಯಾಗಿದೆ. ಇದರ ಮುಖಂಡರು ಶಿಕ್ಷಣದಲ್ಲಿ ಪೂರ್ಣವಾಗಿ ಹಿಂದೂತ್ವ ಸಿದ್ದಾಂತ ಪಾಲನೆಗೆ ಅವಕಾಶ ನೀಡಿಲ್ಲ. ಅವರಿಗೆ ಶಿಕ್ಷಣವೆಂದರೆ ಬರೀ ವ್ಯವಹಾರವಷ್ಟೆ.
ವಿವಿಧ ಕಾಲೇಜುಗಳಿಗೆ ಸ್ಥಳೀಯ ಪರಿಸ್ಥಿತಿ ಆಧಾರದ ಮೇಲೆ ಕೆಲವೊಂದು ಸಂಸ್ಥೆಗಳು ವಿವಿಧ ನಿಯಮಗಳನ್ನು ಮಾಡಿವೆ. ಬಜರಂಗದಳದ ಹಿರಿಯ ಮುಖಂಡರೊಬ್ಬರು ನಾಲ್ಕು ಕಾಲೇಜುಗಳನ್ನೊಳಗೊಂಡ ಸಂಸ್ಥೆಯೊಂದರ ಅಧ್ಯಕ್ಷರಾಗಿದ್ದು, ಮಂಗಳೂರಿನ ಕೊಡಿಯಾಳ್ ಬೈಲ್ ನಲ್ಲಿರುವ ಪಿಯು ಕಾಲೇಜಿನಲ್ಲಿ ಹಿಜಾಬ್ ನ್ನು ನಿರ್ಬಂಧಿಸಿದ್ದಾರೆ. ಆದರೆ, ಇದೇ ಸಂಸ್ಥೆ ಕೇರಳ ಗಡಿ ಪ್ರದೇಶ ತಲಪಾಡಿಯಲ್ಲಿ ನಡೆಸುತ್ತಿರುವ ಡಿಗ್ರಿ ಕಾಲೇಜ್ ಮತ್ತು ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಲಾಗಿದೆ.
ಪಿಯು ಕಾಲೇಜಿನಲ್ಲಿ ಹಿಜಾಬ್ ನಿರ್ಬಂಧಿಸಿದ್ದೇವೆ. ಆದರೆ, ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನಿರ್ಬಂಧಿಸಿಲ್ಲ ಎಂದು ಈ ಸಮೂಹ ಸಂಸ್ಥೆಯ ಖಜಾಂಚಿ ಪ್ರದೀಶ್ ಕುಮಾರ್ ಕಲ್ಕೂರ ಒಪ್ಪಿಕೊಳ್ಳುತ್ತಾರೆ. ಈ ರೀತಿಯ ನಿಯಮ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರ ವಿಕೇಂದ್ರೀಕೃತವಾಗಿದೆ ಮತ್ತು ಆಯಾ ಪ್ರಾಂಶುಪಾಲರು ಇದನ್ನು ತೆಗೆದುಕೊಳ್ಳುತ್ತಾರೆ ಎಂದರು.
ವೆಬ್ ಸೈಟ್ ಗಳಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರ ಚಿತ್ರ: ಕೊಂಚಾಡಿಯಲ್ಲಿ ಬಿಜೆಪಿಯ ಮಾಜಿ ಸಚಿವರು ಹಾಗೂ ಶಕ್ತಿನಗರದಲ್ಲಿ ಆರ್ ಎಸ್ ಎಸ್ ಮುಖಂಡರಿಗೆ ಸೇರಿದ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಸ್ವಾಗತಿಸಲಾಗುತ್ತಿದೆ. ಈ ಎಲ್ಲಾ ಕಾಲೇಜುಗಳ ವೆಬ್‌ಸೈಟ್‌ಗಳಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರನ್ನು ತೋರಿಸುವ ಚಿತ್ರಗಳಿವೆ. ಇದಲ್ಲದೆ, ಮಿಲಾಗ್ರಿಸ್ ಕಾಲೇಜು, ವಿಕಾಸ್ ಪಿಯು ಕಾಲೇಜು, ಸೇಂಟ್ ಅಲೋಶಿಯಸ್ ಕಾಲೇಜು, ಶಕ್ತಿ ಪಿಯು ಕಾಲೇಜು, ಸೇಂಟ್ ಆನ್ಸ್ ಕಾಲೇಜು ಮತ್ತು ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಲಪಂಥೀಯ ಹೋರಾಟಗಾರ್ತಿ ವಿದ್ಯಾ ದಿನಕರ್, ಜಿಲ್ಲೆಯಲ್ಲಿನ ಖಾಸಗಿ ಸಂಸ್ಥೆಗಳು ವ್ಯವಹಾರದ ಕಡೆಗೆ ಗಮನ ಹರಿಸಿವೆ, ಇಂತಹ ವಿಷಯಗಳ ಮೂಲಕ ಅವರ ಕಮರ್ಷಿಯಲ್ ಹಿತಾಸಕ್ತಿಗೆ ಧಕ್ಕೆ ತರುವುದು ಬೇಡ ಎನ್ನುತ್ತಾರೆ.