Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಭಾರತದ ‘ಗಾನಕೋಗಿಲೆ’ ಲತಾ ಮಂಗೇಶ್ಕರ್ ಇನ್ನಿಲ್ಲ

ಮುಂಬೈ: ಗಾನಕೋಗಿಲೆ ಲತಾ ಮಂಗೇಶ್ಕರ್(Lata Mangeshkar) ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೋವಿಡ್ ಪಾಸಿಟಿವ್ ಬಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ(Breach candly hospital) ದಾಖಲಾಗಿದ್ದ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದಲೂ ಅವರು ಬಳಲುತ್ತಿದ್ದರು.

92 ವರ್ಷದ ಲತಾ ಮಂಗೇಶ್ಕರ್ ಕೋವಿಡ್ ಸೋಂಕಿನ ಸೌಮ್ಯ ಲಕ್ಷಣ(Covid-19) ಕಂಡುಬಂದು ಕಳೆದ ಜನವರಿ 8ರಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದರು.  ಕೆಲ ದಿನಗಳ ನಂತರ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದ್ದರಿಂದ ವೆಂಟಿಲೇಟರ್ ನೆರವನ್ನು ತೆಗೆಯಲಾಗಿತ್ತು. ಆದರೆ ನಿನ್ನೆ ಮತ್ತೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು.

ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ ಪ್ರತೀತ್ ಸಮ್ದನಿ, ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8 ಗಂಟೆ 12 ನಿಮಿಷಕ್ಕೆ ನಿಧನ ಹೊಂದಿದರು. ಕೋವಿಡ್ ಸೋಂಕಿಗೆ ತುತ್ತಾಗಿ ಜನವರಿ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿ 28 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಇಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಲತಾ ಮಂಗೇಶ್ಕರ್ ಅವರು ನಿಧನರಾಗುವುದಕ್ಕೆ ಸ್ವಲ್ಪ ಹೊತ್ತು ಮೊದಲು ಮಹಾರಾಷ್ಟ್ರದವರೇ ಆದ ಕೇಂದ್ರ ಭೂಸಾರಿಗೆ ಸಚಿವ ನಿತೀಶ್ ಗಡ್ಕರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಅಷ್ಟರಲ್ಲೇ ಅವರ ಲತಾ ಮಂಗೇಶ್ಕರ್ ಸಾವಿನ ಸುದ್ದಿ ಹೊರಬಿತ್ತು.

ಆಸ್ಪತ್ರೆ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಲತಾಮಂಗೇಶ್ಕರ್ ಅವರ ನಿಧನವು ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಂಗೀತವು ಅನೇಕ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಂಗೇಶ್ಕರ್ ಅವರು 1942ರಲ್ಲಿ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹಲವಾರು ಭಾರತೀಯ ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಭಾರತದ ನೈಟಿಂಗೇಲ್(ಗಾನ ಕೋಗಿಲೆ) ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರು ಪದ್ಮಭೂಷಣ, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಬಹು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ.

ಅವರು ಹಾಡಿದ ‘ಆಯ್ ಮೇರೆ ವತನ್ ಕೆ ಲೋಗೋ’, ‘ಲಗ್ ಜಾ ಗಲೇ’, ‘ಯೇ ಗಲಿಯಾನ್ ಯೇ ಚೌಬಾರಾ’, ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’, ‘ಬಹೋನ್ ಮೇ ಚಲೇ ಆವೋ’, ‘ವೀರ್ ಜರಾ’ದ ‘ತೇರೆ ಲಿಯೇ’ ಮತ್ತು ಇನ್ನೂ ಅನೇಕ ಹಾಡುಗಳು ಜನಪ್ರಿಯವಾಗಿವೆ.

ಕನ್ನಡದಲ್ಲೂ ಹಾಡಿದ್ದ ಲತಾ ದೀದಿ: ತಮ್ಮ 13ನೇ ವಯಸ್ಸಿನಲ್ಲೇ ಹಾಡುವುದಕ್ಕೆ ಪ್ರಾರಂಭಿಸಿದ ಲತಾ ಮಂಗೇಶ್ಕರ್ ಇದುವರೆಗೂ ಹಿಂದಿ(Hindi) ಭಾಷೆಯೊಂದರಲ್ಲೇ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಗೂ ಭಾರತದ 36 ವಿವಿಧ ಭಾಷೆ(36 Different Language)ಗಳಲ್ಲಿ ಹಾಡಿದ ಕೀರ್ತಿ ಅವರದ್ದು. ಕನ್ನಡದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಬೆಳ್ಳನೆ ಬೆಳಗಾಯಿತು..’ ಹಾಡನ್ನು ಹಾಡಿ ಕನ್ನಡ ಚಿತ್ರರಂಗಕ್ಕೂ ಲತಾ ಪ್ರವೇಶ ಮಾಡಿದ್ದರು.

ವಿದೇಶಿ ಭಾಷೆಗಳಲ್ಲಿಯೂ ಲತಾ ಮಂಗೇಶ್ಕರ್ ಕೂಡ ಹಾಡಿದ್ದಾರೆ.ಭಾರತೀಯ ಭಾಷೆಗಳಲ್ಲಿ ಅವರು ಹೆಚ್ಚಾಗಿ ಹಾಡಿದ್ದು ಹಿಂದಿ, ಮರಾಠಿ ಭಾಷೆಗಳಲ್ಲಿ. ಬಂಗಾಳಿಯಲ್ಲಿ 185 ಹಾಡು ಹಾಡಿದ್ದಾರೆ, ದಾದಾಸಾಹೇಬ್ ಫಾಲ್ಕೆ, ಭಾರತ ರತ್ನ ಸೇರಿ ಸಾಕಷ್ಟು ಪ್ರಶಸ್ತಿಗಳನ್ನು ಲತಾ ಮಂಗೇಶ್ಕರ್ ಪಡೆದುಕೊಂಡಿದ್ದಾರೆ. ಲತಾ ಮಂಗೇಶ್ಕರ್ ಸಹೋದರಿಯರು ಕೂಡ ಗಾಯಕಿಯರು.

ಲತಾ ಅವರ ಪಾರ್ಥಿವ ಶರೀರವನ್ನು ಅಪರಾಹ್ನದವರೆಗೆ ಮುಂಬೈನ ಅವರ ನಿವಾಸದಲ್ಲಿ ಇರಿಸಲಾಗುತ್ತದೆ.

ರಾಷ್ಟ್ರಪತಿ, ಪ್ರಧಾನಿ ಕಂಬನಿ: ಲತಾ ಮಂಗೇಶ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರ, ರಾಜ್ಯ ನಾಯಕರು, ಇಡೀ ಭಾರತೀಯ ಚಿತ್ರರಂಗದ ಗಣ್ಯರು, ಕಲಾವಿದರು, ದೇಶದ ಜನತೆ ಕಂಬನಿ ಮಿಡಿಯುತ್ತಿದ್ದಾರೆ.

ಮುಂಬರುವ ಪೀಳಿಗೆಯವರು ಲತಾ ಮಂಗೇಶ್ಕರ್ ಅವರನ್ನು ಭಾರತೀಯ ಸಂಸ್ಕೃತಿಯ ಧೀಮಂತಿಕೆ ಎಂದು ನೆನಪಿಸಿಕೊಳ್ಳುತ್ತಾರೆ, ಅವರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಹೇಳಲಾರದಷ್ಟು ದುಃಖವಾಗುತ್ತಿದೆ, ರಾಷ್ಟ್ರದಲ್ಲಿ ತುಂಬಲಾಗದ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ. ಚಲನಚಿತ್ರಗಳ ಹೊರತಾಗಿ ಲತಾ ದೀದಿ ಅವರು ಯಾವಾಗಲೂ ಭಾರತದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದರು ಮತ್ತು ಬಲವಾದ, ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸಿದ್ದರು ಎಂದು ಪ್ರಧಾನಿ ಕಂಬನಿ ಮಿಡಿದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, “ಲತಾ ಜೀ ಅವರ ನಿಧನವು ನನಗೆ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ದುಃಖ ತಂದಿದೆ” ಎಂದು ಹೇಳಿದ್ದಾರೆ.

No Comments

Leave A Comment