ಮೇ6ರ೦ದು ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ೦ಕಲ್ಪ
ಉಡುಪಿ:ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶನಿವಾರದ೦ದು ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ಪಣಿಯಾಡಿ ಅನಂತ ಪದ್ಮನಾಭ ದೇವರ ದಿವ್ಯ ಸನ್ನಿಧಿಗೆ ಚಿತ್ತೈಸಿ ಮುಂದೂಡಲ್ಪಟ್ಟ ಬ್ರಹ್ಮಕಲಶ ಉತ್ಸವ ಕಾರ್ಯಕ್ರಮದ ಪ್ರಯುಕ್ತ ಕ್ಷಮೆ ಯಾಚಿಸಿ ಶ್ರೀದೇವರ ಮುಂಭಾಗದಲ್ಲಿ ಫಲ ಪುಷ್ಪಾದಿಗಳನ್ನು ಇಟ್ಟು ತಂತ್ರಿಗಳು, ಪ್ರಧಾನ ಅರ್ಚಕರು ಹಾಗೂ ಆಚಾರ್ಯತ್ರಯರ ಮುಖೇನ ಹಾಗೂ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಪ್ರಾರ್ಥನೆ ಸಲ್ಲಿಸಿ ಅನಂತ ಪದ್ಮನಾಭನ ಸುಂದರ ಆಲಯವನ್ನು ಸಂಪೂರ್ಣಗೊಳಿಸಿ ದೇವರಿಗೆ ಒಪ್ಪಿಸಿ ದಿನಾಂಕ ಮೇ 6ರಂದು ಬ್ರಹ್ಮಕಲಶೋತ್ಸವಾದಿ ವಿಧಿ ವಿಧಾನ ಹೋಮ ಹವನಾದಿಗಳನ್ನು ನೆರವೇರಿಸುವುದಾಗಿ ಸಂಕಲ್ಪಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು ಹಾಗೂ ಎಲ್ಲಾ ಭಕ್ತಾದಿಗಳು ಸೇರಿ ಈ ಸಂಕಲ್ಪವನ್ನು ಪೂರ್ಣಗೊಳಿಸಲು ತನುಮನ ಧನದ ರೂಪದಲ್ಲಿ ಪೂಜ್ಯ ಸ್ವಾಮೀಜಿಯವರ ಜೊತೆ ಕೈ ಜೋಡಿಸಬೇಕು ಎಂದು ನಾಗರಾಜ್ ಆಚಾರ್ಯರವರು ಭಿನ್ನವಿಸಿಕೊಂಡರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ಅವರ ಚತುರ್ಥಪರ್ಯಾಯದ ಅಂಗವಾಗಿ ಹಮ್ಮಿಕೊಂಡಿರುವ ಅನಂತ ಪದ್ಮನಾಭನ ಮುಖ ಪದ್ಮದಲ್ಲಿ ಅರಳಿದ ಭಗವದ್ಗೀತೆಯ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಎಲ್ಲರೂ ಭಾಗಿಯಾಗುವಂತೆ ಕೇಳಿಕೊಂಡರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು,ಪದಾಧಿಕಾರಿಗಳು,ಸರ್ವಸದಸ್ಯರು ಹಾಗೂ ಊರಹತ್ತು ಸಮಸ್ತರು, ದೇವಳದ ಅರ್ಚಕವೃ೦ದದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.