ಮುಖ್ಯಮಂತ್ರಿ ಬೊಮ್ಮಾಯಿ ಫೆ.7ರಂದು ದೆಹಲಿಗೆ: ಗರಿಗೆದರಿದ ಸಂಪುಟ ವಿಸ್ತರಣೆ ಸರ್ಕಸ್, ಬಜೆಟ್ ಪೂರ್ವ ಸಭೆ ಮುಂದೂಡಿಕೆ
ಬೆಂಗಳೂರು: ಮುಖ್ಯಮಂತ್ರಿ ದೆಹಲಿ ಪ್ರವಾಸ ಮುಂದೂಡಲಾಗಿದೆ. ಆರಂಭದಲ್ಲಿ ಇಂದು ಗುರುವಾರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹೈಕಮಾಂಡ್ ಬರುವ ಸೋಮವಾರ ಭೇಟಿಗೆ ಸಮಯ ನಿಗದಿಪಡಿಸಿರುವುದರಿಂದ ಫೆಬ್ರವರಿ 7ರಂದು ದೆಹಲಿಗೆ ಹೋಗುತ್ತಿದ್ದಾರೆ.
ಮುಖ್ಯಮಂತ್ರಿಗಳ ದೆಹಲಿ ಭೇಟಿಯ ಪ್ರಮುಖ ಅಜೆಂಡಾ ಆಗಿರುವುದು ಸಚಿವ ಸಂಪುಟ ವಿಸ್ತರಣೆ, ರಾಜ್ಯದ ಜಲ ವಿವಾದ ಕುರಿತು ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸುವುದು, ಮುಂದಿನ ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್ ಕುರಿತು ವರಿಷ್ಠರೊಂದಿಗೆ, ರಾಜ್ಯದ ಸಂಸದರೊಂದಿಗೆ ಚರ್ಚಿಸಿ ಅವರ ಸಲಹೆ, ಅಭಿಪ್ರಾಯ ಪಡೆಯುವುದು.
ಸೋಮವಾರ ದೆಹಲಿಗೆ ಹೋಗುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ ಬೆನ್ನಲ್ಲೇ ಇತ್ತ ರಾಜ್ಯದಲ್ಲಿ ಬಿಜೆಪಿಯೊಳಗೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಸಚಿವಾಕಾಂಕ್ಷಿಗಳು ಕೂಡ ದೆಹಲಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಮುಂದೆ ತಮ್ಮನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಡ ಹಾಕಿರುವುದಲ್ಲದೆ ಇದೀಗ ವರಿಷ್ಠರ ಗಮನ ಸೆಳೆದು ಹೇಗಾದರೂ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಹರಸಾಹಸ ಮಾಡುತ್ತಿದ್ದಾರೆ.
ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ರಮೇಶ್ ಜಾರಕಿಹೊಳಿ, ಮೈಸೂರಿನ ಎಸ್ ಎ ರಾಮದಾಸ್, ಹೊನ್ನಾಳಿಯ ಶಾಸಕ ಎಂ ಪಿ ರೇಣುಕಾಚಾರ್ಯ, ಚಿಕ್ಕಮಗಳೂರಿನ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ, ಚಿತ್ರದುರ್ಗದ ಜಿ ಎಚ್ ತಿಪ್ಪಾರೆಡ್ಡಿ, ಆನಂದ ಮಾಮನಿ ಮೊದಲಾದವರಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮತ್ತು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಕೆಲವರು ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದರು. ಈ ಬಗ್ಗೆ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಅವರು ಕರೆ ಮಾಡಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುವಂತೆ ಮಾತನಾಡಬೇಡಿ ಎಂದು ಹೇಳಿದ್ದರು. ಅವರು ದೆಹಲಿಗೆ ಕರೆದಿರುವುದರಿಂದ ಇದೇ 8ರಂದು ಹೋಗುತ್ತಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.
ಸಂಪುಟ ವಿಸ್ತರಣೆ ವೇಳೆ ಕೆಲವು ಹಳೆ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು, ಕೆಲವು ಸಚಿವರು ಕ್ಷೇತ್ರದ ಕೆಲಸ ಮಾಡಿಸಿಕೊಳ್ಳಲು ಸಹಕಾರ ನೀಡುತ್ತಿಲ್ಲ ಎಂದು ಪತ್ರ ಬರೆದು ಸುದ್ದಿಯಾಗಿದ್ದ ರೇಣುಕಾಚಾರ್ಯ ಸಂಪುಟ ವಿಸ್ತರಣೆ ವಿಚಾರವನ್ನು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಫೆಬ್ರವರಿ 7ರ ಬಜೆಟ್ ಪೂರ್ವಭಾವಿ ಸಭೆ ಮುಂದೂಡಿಕೆ: ಮಾರ್ಚ್ ಆರಂಭದಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಬೇಕಿರುವುದರಿಂದ ಸಂಬಂಧಪಟ್ಟವರೊಂದಿಗೆ ಫೆಬ್ರವರಿ7ರಂದು ಬಜೆಟ್ ಪೂರ್ವಭಾವಿ ಸಭೆ ಕರೆಯಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದರು. ಆದರೆ ಅಂದು ಅವರು ದೆಹಲಿಗೆ ಹೋಗುತ್ತಿರುವುದರಿಂದ ಬಜೆಟ್ ಪೂರ್ವಭಾವಿ ಸಭೆಯನ್ನು ಮುಂದೂಡಲಾಗಿದೆ.