Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶೋಭಕ್ಕ ಬರ್ತಾರೆ ದಾರಿ ಬಿಡಿ, ಮಹಿಳೆಯ ಕೈಗೆ ರಾಜ್ಯದ ಅಧಿಕಾರ-ರಾಜ್ಯದಲ್ಲಿ ಬಿ ಜೆ ಪಿಯಲ್ಲಿ ಮತ್ತೆ ಥಳಮಳ

ಉಡುಪಿ: ಸುಳ್ಯ ತಾಲ್ಲೂಕಿನ ಚಾರ್ವಾಕ ಗ್ರಾಮದ ಸುಸಂಸ್ಕೃತ ಮಹಿಳೆ ಪೂವಕ್ಕರವರ ಪುತ್ರಿ, ಬಿ ಜೆ ಪಿಯ ಗಟ್ಟಿ ದನಿಯ ಶಕ್ತಿಯುತ ಮಹಿಳಾ ರಾಜಕಾರಣಿ, ಕರ್ನಾಟಕ ರಾಜ್ಯ ಕಂಡ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರಾ? ಅಥವಾ ರಾಜ್ಯ ಬಿಜೆಪಿ ನಾಯಕತ್ವವನ್ನು ಅವರ ಹೆಗಲಿಗೆ ಹೊರಿಸಲಾಗುತ್ತದೆಯಾ?

ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಪಡೆಯಲಿದ್ದಾರಾ? ಬರಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಅವರಿಗೆ ಪ್ರಮುಖ ಸ್ಥಾನ ನೀಡಲಾಗುತ್ತದಾ? ಕೆಲವೇ ದಿನಗಳ ಮೊದಲು ಶೋಭಾ ಕರಂದ್ಲಾಜೆ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ನಿಜಾನ?…..

ರಾಜ್ಯ ಬಿಜೆಪಿಯಲ್ಲಿ ಸದ್ಯ ಅತ್ಯಂತ ಕಾವಿನಲ್ಲಿರುವ ಪ್ರಶ್ನೆಗಳಿವು…

ಬರಲಿರುವ ರಾಜ್ಯ ವಿಧಾನಸಭೆಗೆ ಮುನ್ನ ರಾಜ್ಯ ಬಿಜೆಪಿಯ ಖದರ್ ಬದಲಾಗುವ ಸೂಚನೆಗಳಿವೆ. ಹಳೆಯ ತಲೆಮಾರಿನ ರಾಜಕಾರಣಿಗಳ ಬದಲಾಗಿ ಹೊಸ ತಲೆಮಾರಿನ ಹಾರ್ಡ್‍ಕೋರ್ ಹಿಂದುತ್ವವಾದಿಗಳಿಗೆ ರಾಜ್ಯರಾಜಕಾರಣದ ಹೆಬ್ಬಾಗಿಲನ್ನು ತೆರೆದಿಡಲು ಪಕ್ಷ ಹೈಕಮಾಂಡ್ ನಿರ್ಧರಿಸಿದಂತಿದೆ.

ಇದೇ ಕಾರಣಕ್ಕಾಗಿ ಕಳೆದ ಒಂದು ತಿಂಗಳಿಂದ ಶೋಭಾ ಕರಂದ್ಲಾಜೆ ಹೆಸರು ಭಾರೀ ಸದ್ದು ಮತ್ತು ಸುದ್ದಿ ಮಾಡುತ್ತಿದೆ. ರಾಜ್ಯ ರಾಜಕಾರಣಕ್ಕೆ ಹಿಂದಿರುಗಲು ವೈಯಕ್ತಿಕ ನೆಲೆಯಲ್ಲಿಯೂ ಕೂಡ ಶೋಭಾ ಆಸಕ್ತಿ ವಹಿಸಿದ್ದಾರೆ ಎನ್ನುವ ಅಭಿಪ್ರಾಯಗಳು ಅವರ ಆಪ್ತ ವಲಯದಿಂದಲೇ ಕೇಳಿ ಬರುತ್ತಿವೆ.

ರಾಜ್ಯ ಸಚಿವ ಸಂಪುಟದ ಪುನರ್ ರಚನೆಯ ನಂತರ ಶೋಭಾ ಕರಂದ್ಲಾಜೆ ರಾಜ್ಯಕ್ಕೆ ಹಿಂದಿರುವ ಕುರಿತಂತೆ ಪಕ್ಷದ ಕಮಾಂಡ್ ನಿರ್ಧಾರ ಕೈಗೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯ ಬಿಜೆಪಿಯ ಪ್ರಬಲ ಗುಂಪೊಂದು ಶೋಭಾ ಕರಂದ್ಲಾಜೆ ಅವರ ಬೆಂಬಲಕ್ಕೆ ನಿಂತಿದೆ.

ಕಳೆದ ಬಾರಿ ನರೇಂದ್ರ ಮೋದಿ ಮುಂದಾಳತ್ವದ ಚಂಡಮಾರುತದ ಅಲೆಯ ಮುಂದೆ, ಸ್ವಪಕ್ಷದ ಕೆಲವರ ಷಡ್ಯಂತ್ರದ ನಡುವೆಯೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಭರ್ಜರಿಯಾಗಿ ಗೆದ್ದುಬಂದಿದ್ದರು.
ರಾಜ್ಯ ರಾಜಕಾರಣದಲ್ಲಿ ಶೋಭಕ್ಕ ಶೋಭಾಯಮಾನವಾಗುವ ಸಾಧ್ಯತೆಗಳನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ.
ಕುಮಾರಧಾರ ಅಣೆಕಟ್ಟು ವಿರೋಧಿ ಹೋರಾಟದ ಮೂಲಕ ರಾಜಕಾರಣದ ಅಂಗಳಕ್ಕೆ ನಡೆದು ಬಂದ ಶೋಭಾ ಕರಂದ್ಲಾಜೆ, ಕೇಂದ್ರ ಮಂತ್ರಿ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವವರು. ಒಕ್ಕಲಿಗ ಸಮುದಾಯದ ಅವರಿಗೆ ಸ್ವಾಮಿಗಳ ಆಶೀರ್ವಾದವಿದೆ. ಮಠಗಳ ಬೆಂಬಲವಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ಹಲವು ಮುಖಂಡರು ಶೋಭಾ ಪರ ನಿಲ್ಲಲಿದ್ದಾರೆ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ.

ಉಡುಪಿ-ಚಿಕ್ಕಮಗಳೂರು ಸಂಸದರಾಗಿದ್ದ ಡಿವಿ ಸದಾನಂದಗೌಡ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಒದಗಿಬಂದಿತ್ತು. ಇದೀಗ ಅದೇ ಕ್ಷೇತ್ರದ ಸಂಸದರಾಗಿರುವ ಶೋಭಾ ಕರಂದ್ಲಾಜೆಯವರಿಗೂ ಈ ಭಾಗ್ಯ ಸಿಗಬಹುದಾ ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿದೆ.

ಹಿಂದೊಮ್ಮೆ ರಾಜ್ಯ ರಾಜಕಾರಣದಲ್ಲಿ ಶೋಭಾ ಕರಂದ್ಲಾಜೆಯವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿತ್ತು. ಇದೀಗ ಅವರು ಕೇಂದ್ರ ಮಂತ್ರಿಯಾಗುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನದ ಅಲೆ ಎಬ್ಬಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಮಹತ್ವದ ತಿರುವಿಗೆ ಅವರ ಹೆಸರು ಬಂದು ನಿಲ್ಲುವ ಸಾಧ್ಯತೆಗಳ ಬಗ್ಗೆಯೂ ಸಂಘ-ಪರಿವಾರ ಹಾಗೂ ಪಾರ್ಟಿ ನಾಯಕರ ನಡುವೆ ಚರ್ಚೆಗಳಾಗುತ್ತಿವೆ.

ಹೋರಾಟದ ಹಾದಿಯಲ್ಲಿ ನಡೆದು ಬಂದ ನಾಯಕಿ…

ಆರಂಭದಲ್ಲಿ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡವರು. ಹಿಂದುತ್ವದ ಹಾದಿಯಲ್ಲಿ ಆರಂಭವಾದ ಅವರ ಪ್ರಯಾಣ ಪುತ್ತೂರು ತಾಲೂಕಿನ ಉರುಂಬಿ ಮತ್ತು ಕಕ್ವೆಯಲ್ಲಿ ಕುಮಾರಧಾರ ನದಿ ಅಣೆಕಟ್ಟು ವಿರೋಧಿ ಹೋರಾಟದ ಮೂಲಕ ಭಾರತೀಯ ಜನತಾ ಪಾರ್ಟಿಯ ನಾಯಕರ ಮನಸೆಳೆಯುವಲ್ಲಿಯವರೆಗೂ ತಲುಪಿತು. ಇದು ಶೋಭಾ ಕರಂದ್ಲಾಜೆಯವರಿಗೆ ಮೊದಲ ರಾಜಕೀಯ ರೋಮಾಂಚನದ ಹೋರಾಟವಾಗಿತ್ತು.

 ಹೊತ್ತಿಗಾಗಲೇ ಹಿಂದುತ್ವಕ್ಕಾಗಿ, ಸಂಘಕ್ಕಾಗಿ ಜೀವನವನ್ನೇ ಮುಡಿಪಾಗಿರಿಸಲು ಶೋಭಾ ಕರಂದ್ಲಾಜೆ ನಿರ್ಧರಿಸಿಯಾಗಿತ್ತು. ಕುಮಾರಧಾರ ನದಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿ ಅದರ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ಯೋಚಿಸಿತ್ತು. ಅದಕ್ಕಾಗಿ ರಾಜ್ಯಮಟ್ಟದ ನಾಯಕರು ಪುತ್ತೂರಿಗೆ ಬಂದು ಹೋಗುತ್ತಿದ್ದರು.

ಆರಂಭದಲ್ಲಿ ಶೋಭಾರಿಗೆ ಸಂಘದ ಕಡೆಗೆ ನಿಷ್ಠೆ ಇತ್ತೇ ಹೊರತು ಅದೇ ಸಿದ್ಧಾಂತವಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಪಾರ್ಟಿಯ ಬಗ್ಗೆ ಹೇಳಿಕೊಳ್ಳುವಂತಹ ಒಲವಿರಲಿಲ್ಲ. ಕುಮಾರಧಾರ ಹೋರಾಟದಲ್ಲಿ ಪಾಲ್ಗೊಂಡ ನಂತರ ರಾಜಕೀಯದ ಒಂದೊಂದೇ ಮೆಟ್ಟಿಲನ್ನು ಏರಿದ್ದ ಅವರಿಗೆ ವಿಧಾನಸೌಧದ ಮೊಗಸಾಲೆಗೆ ಬರುವ ಹೊತ್ತಿಗಾಗಲೇ ರಾಜಕಾರಣದ ಗ್ರೌಂಡ್ ರಿಯಾಲಿಟಿಗಳು ಅರ್ಥವಾಗಿತ್ತು. ವೀರಸಾವರ್ಕರ್‍ರಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ ತನಕದ ಮಹನೀಯರ ಬಗ್ಗೆ ನಿರರ್ಗಳವಾಗಿ ಮಾತನಾಡುವುದನ್ನು ಅಷ್ಟೊತ್ತಿಗಾಗಲೇ ರೂಢಿ ಮಾಡಿಕೊಂಡಿದ್ದರು. ಆನಂತರ ನಡೆದದ್ದೆಲ್ಲ ಈಗ ಇತಿಹಾಸ.

ಆ ವೇಳೆ ಪ್ರತಿಪಕ್ಷದ ಉಗ್ರ ನಾಯಕರಾಗಿದ್ದ ಯಡಿಯೂರಪ್ಪವರು ಕರಂದ್ಲಾಜೆಯವರ ಜೀವನದ ದಿಕ್ಕು ಬದಲಿಸಿದರು. ಜನಪರ ಹೋರಾಟಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಿದರು. ಪಕ್ಷದಲ್ಲೂ ದೊಡ್ಡ ಮಟ್ಟಕ್ಕೆ ಬೆಳೆಸಿದರು. ಅಧಿಕಾರ, ಪಕ್ಷ, ನಾಯಕತ್ವ ಏನೆಂಬುದು ಕ್ರಮೇಣ ಶೋಭಾ ಕರಂದ್ಲಾಜೆಯವರಿಗೆ ಮನದಟ್ಟಾಗುತ್ತಾ ಬಂತು. ಈ ನಡುವೆ ರಾಜಕೀಯವಾಗಿ ಶೋಭಾ ಕರಂದ್ಲಾಜೆಯವರನ್ನು ಹಣಿಯುವ ಎಲ್ಲ ಪ್ರಯತ್ನಗಳು ನಡೆಯುತ್ತಲೇ ಇತ್ತು. ಆದರೆ ಶೋಭಾ ಅದನ್ನೆಲ್ಲಾ ಮೀರಿ ನಿಂತರು.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗುವ ಮೂಲಕ ಸುದ್ದಿ ಮಾಡಿದ ಶೋಭಾ ಕರಂದ್ಲಾಜೆ, ತನ್ನ ಪರಿಶ್ರಮದಿಂದ, ಜನಪರ ಕಾಳಜಿಯಿಂದ ಯಶಸ್ಸಿನ ಮೆಟ್ಟಿಲೇರುತ್ತಾ ಬಂದು ಇಂದು ಕೇಂದ್ರ ಸಚಿವರಾಗಿದ್ದಾರೆ. ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರಾ ಅನ್ನುವ ಕುತೂಹಲ ಕಾರ್ಯಕರ್ತರಲ್ಲಿದೆ.

ಒಟ್ಟಾರೆ ರಾಜ್ಯ ಬಿ ಜೆಪಿ ಮುಖ೦ಡರಲ್ಲಿ ಹೆದರಿಕೆಯ ವಾತಾವರಣ ನಿರ್ಮಾಣವಾಗಿದೆ.

No Comments

Leave A Comment