ಸಂಪುಟ ವಿಸ್ತರಣೆಗೆ ನಾನು ಸಿದ್ಧ, ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ ಎನ್ನಬಹುದು. ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಎಲೆಕ್ಷನ್ ಮೂಡ್ ಗೆ ಬಂದಿವೆ.
ಈ ಮಧ್ಯೆ ರಾಜ್ಯ ಸಚಿವ ಸಂಪುಟದಲ್ಲಿ ವಿಸ್ತರಣೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಸಂಪುಟದಲ್ಲಿ ನಾಲ್ಕು ಸಚಿವ ಹುದ್ದೆಗಳು ಖಾಲಿಯಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದರು. ಇದೀಗ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ವರಿಷ್ಠರು ಹೇಳಿದ ತಕ್ಷಣ ಸಂಪುಟ ವಿಸ್ತರಣೆಯಾಗುತ್ತದೆ, ವರಿಷ್ಠರು ಹೇಳಿದ ತಕ್ಷಣ ದೆಹಲಿಗೆ ಹೋಗುತ್ತೇನೆ, ನಾನು ಸಂಪುಟ ವಿಸ್ತರಣೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷದ ವರಿಷ್ಠರು ಹೇಳಿದ ತಕ್ಷಣ ಸಂಪುಟ ವಿಸ್ತರಣೆಯಾಗುತ್ತದೆ, ವರಿಷ್ಠರು ಹೇಳಿದ ತಕ್ಷಣ ದೆಹಲಿಗೆ ಹೋಗುತ್ತೇನೆ. ಸಚಿವ ಸಂಪುಟ ವಿಸ್ತರಣೆ ಸಲುವಾಗಿ ಯಾವಾಗ ಕರೆಯುತ್ತಾರೋ ಆಗ ಸಿದ್ದನಿದ್ದೇನೆ. ವರ್ಷದ ಪ್ರಾರಂಭದಲ್ಲಿ ಎಲ್ಲಾ ಸಂಸದರನ್ನು ಭೇಟಿ ಮಾಡುವ ವಾಡಿಕೆ ಇದೆ, ಹಾಗಾಗಿ ಆದಷ್ಟು ಬೇಗ ಎಲ್ಲಾ ಸಂಸದರ ಜೊತೆ ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಸಿದ್ದು-ಡಿಕೆಶಿ ಒಳಜಗಳ ಗುಟ್ಟೇನು ಅಲ್ಲ: ಕಾಂಗ್ರೆಸ್ ನವರ ಗುಣ ಎಂದಿಗೂ ಬದಲಾಗಲ್ಲ, ಸಿದ್ದರಾಮಯ್ಯ-ಡಿಕೆಶಿ ಒಳಜಗಳ ಎಲ್ಲರಿಗೂ ಗೊತ್ತಿದ್ದೆ, ಕಾಂಗ್ರೆಸ್ ನವರು ಎಂದಿಗೂ ಜನಪರ ಕೆಲಸಗಳನ್ನು ಮಾಡಿಲ್ಲ, ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಂದ ಟೀಕೆ ಬಿಟ್ಟರೆ ಬೇರೇನು ನಿರೀಕ್ಷೆ ಮಾಡಲು ಸಾಧ್ಯ, ಹಾಗಾಗಿಯೇ ಅವರನ್ನು ಕಳೆದ ಚುನಾವಣೆಯಲ್ಲಿ ರಾಜ್ಯದ ಜನರು ಮನೆಗೆ ಕಳುಹಿಸಿದ್ದು ಎಂದು ಟೀಕಿಸಿದರು.