Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಪೆಗಾಸಸ್: ಹೊಸ ಆರೋಪಗಳ ಸರಣಿ, ಪಂಚ ರಾಜ್ಯ ಚುನಾವಣೆ, ಬಜೆಟ್ ಅಧಿವೇಶನದ ಹೊತ್ತಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿದ ಮೋದಿ ಸರ್ಕಾರ

ನವದೆಹಲಿ: ಬೇಹುಗಾರಿಕೆ ಸಾಫ್ಟ್‌ವೇರ್ ಪೆಗಾಸಸ್ ಒಪ್ಪಂದದ ನ್ಯೂಯಾರ್ಕ್ ಟೈಮ್ಸ್ ವರದಿ ರಾಷ್ಟ್ರ ರಾಜಧಾನಿಯಲ್ಲಿ ತಲ್ಲಣ ಉಂಟು ಮಾಡಿದ್ದು, ಪಂಚ ರಾಜ್ಯ ಚುನಾವಣೆ, ಬಜೆಟ್ ಅಧಿವೇಶನದ ಹೊತ್ತಲ್ಲಿ ಮೋದಿ ಸರ್ಕಾರವನ್ನು ಅಕ್ಷರಶಃ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

5 ರಾಜ್ಯಗಳ ಚುನಾವಣೆ ಮತ್ತು ಬಜೆಟ್ ಅಧಿವೇಶನ ಮುನ್ನವೇ ಈ ವರದಿ ಬಂದಿರುವುದು ಆಡಳಿತರೂಢ ಎನ್ ಡಿ ಎ ಸರ್ಕಾರವನ್ನು ಇಕ್ಕಟ್ಟಿಗೆ ತಳ್ಳಲು ವಿಪಕ್ಷಗಳಿಗೆ ಹೊಸ ಅಸ್ತ್ರವಾಗಿ ಪರಿಣಮಿಸಿದೆ. ಪೆಗಾಸಸ್ ಒಪ್ಪಂದದ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿಯ ನಂತರ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

ಈ ರಿಪೋರ್ಟ್ ಬಗ್ಗೆ ಪ್ರಧಾನಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ಕಣ್ಣಿಡಲು ಸರ್ಕಾರ ಪೆಗಾಸಸ್ ಸ್ಪೈವೇರ್ ಅನ್ನು ಜನರ ತೆರಿಗೆ ಹಣದಿಂದ 300 ಕೋಟಿ ರೂಪಾಯಿಗೆ ಖರೀದಿಸಿದೆ ಎಂಬುದು ಈ ವರದಿಯಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಶ್ರೀನಿವಾಸ್ ಬೀವಿ, ಶಕ್ತಿ ಸಿಂಗ್ ಗೋಹಿಲ್, ಕಾರ್ತಿ ಚಿದಂಬರಂ ಟ್ವೀಟ್ ಮಾಡಿ ಆರೋಪಿಸಿದ್ದಾರೆ.

ಇಷ್ಟಕ್ಕೂ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಏನಿದೆ?
ಜುಲೈ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದಾಗ ಭಾರತವು ಇಸ್ರೇಲ್‌ನೊಂದಿಗೆ 2 ಬಿಲಿಯನ್ ಡಾಲರ್‌ ಮೊತ್ತದ ಬೃಹತ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ಪ್ರಕಟಿಸಿದ ವರದಿಯಲ್ಲಿ ಹೇಳಿಕೊಂಡಿದೆ. ಈ ಒಪ್ಪಂದದಲ್ಲಿ ಕ್ಷಿಪಣಿ ವ್ಯವಸ್ಥೆಗಳ ಹೊರತಾಗಿ ಇಸ್ರೇಲಿ ಕಂಪನಿ ಎನ್ ಎಸ್ ಒ (NSO) ತಯಾರಿಸಿದ ಪೆಗಾಸಸ್ ಸ್ಪೈವೇರ್ ಅನ್ನೂ ಮೋದಿ ಖರೀದಿ ಮಾಡಿದ್ದಾರೆ ಎಂದು ಹೇಳಿದೆ.

“ಮೋದಿ ಸರ್ಕಾರದಿಂದ ದೇಶದ್ರೋಹ”
ಪೆಗಾಸಸ್ ಡೀಲ್ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ ನೇತೃತ್ವದ ಸರ್ಕಾರದಿಂದ ದೇಶದ್ರೋಹದ ಕೆಲಸವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ “ನಮ್ಮ ಪ್ರಜಾಪ್ರಭುತ್ವದ ಪ್ರಾಥಮಿಕ ಸಂಸ್ಥೆಗಳು, ರಾಜ್ಯ ನಾಯಕರು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಅನ್ನು ಖರೀದಿಸಿದೆ. ಫೋನ್ ಕದ್ದಾಲಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ, ವಿರೋಧ ಪಕ್ಷ, ಸೇನೆ, ನ್ಯಾಯಾಂಗ ಎಲ್ಲವನ್ನೂ ಟಾರ್ಗೆಟ್ ಮಾಡಲಾಗಿದೆ. ಇದು ದೇಶದ್ರೋಹ. ಮೋದಿ ಸರ್ಕಾರ ದೇಶದ್ರೋಹ ಮಾಡಿದೆ” ಎಂದು ಟ್ವೀಟ್ ನಲ್ಲಿ ಅವರು ಆರೋಪಿಸಿದ್ದಾರೆ.

ನ್ಯೂಯಾರ್ಕ್ ಟೈಮ್ಸ್‌ನ ವರದಿಯ ಬೆನ್ನಲ್ಲೇ ಇಂದು ದೆಹಲಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಮೂಲಗಳಿಂದ ಬಂದಿರುವ ಸುದ್ದಿ ಪ್ರಕಾರ ಜನವರಿ 31ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಉಭಯ ಸದನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.

No Comments

Leave A Comment