73ನೇ ಗಣರಾಜ್ಯೋತ್ಸವ: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಗೆಹ್ಲೋಟ್ರಿಂದ ಧ್ವಜಾರೋಹಣ
ಬೆಂಗಳೂರು:73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಗಣತಂತ್ರ ದಿನದ ಆಚರಣೆ ಸರಳವಾಗಿ ಆಚರಿಸಲಾಗುತ್ತಿದ್ದು, ಇಂದು ಬೆಳಗ್ಗೆ 8:58ಕ್ಕೆ ರಾಜ್ಯಪಾಲ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಉತ್ಸವ ಹಾಗೂ ಮಾನವೀಯ ಸಂದೇಶ ಒಳಗೊಂಡಿದೆ. ಸರ್ಕಾರವು ಕೋವಿಡ್ 19 ಸಮರ್ಥವಾಗಿ ಎದುರಿಸಿದೆ. ಸರ್ಕಾರದ ಕಾರ್ಯ ಪ್ರಶಂಸನೀಯವಾಗಿದೆ. ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿ, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿದೆ. ಸರ್ಕಾರ ಕೃಷಿಗೆ ಒತ್ತು ನೀಡಿದೆ. 2021-22ನೇ ಸಾಲಿನಲ್ಲಿ 1,472 ಕೋಟಿ ರೂ. ಮೊತ್ತದ ಜಲಾನಯನ ಅಭಿವೃದ್ದಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 12.76. ಲಕ್ಷ ರೈತರು ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಂಡಿದ್ದಾರೆ. ರೈತರ ಮಕ್ಕಳ ಶಿಕ್ಷಣ ಪ್ರೋತ್ಸಾಹ ಯೋಜನೆಯಡಿ 4.41 ಕೋಟಿ ರೂ. ಮೊತ್ತವನ್ನು 16 ಸಾವಿರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ಹೇಳಿದರು.
ರಾಜ್ಯವು 2023 ರ ಆಗಸ್ಟ್ 15 ರವರೆಗೆ ಅಮೃತ ಮಹೋತ್ಸವ ಅನುಷ್ಠಾನಕ್ಕೆ ಮಾರ್ಗಸೂಚಿ ಸಿದ್ದಪಡಿಸಲಾಗಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ 2ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನ, ಮಾಂಸ ಉತ್ಪಾದನೆಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. ಅತ್ಯಧಿಕ ಹುಲಿಗಳನ್ನು ಹೊಂದಿರುವ ದೇಶದ 2ನೇ ರಾಜ್ಯ, ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಮೊದಲ ರಾಜ್ಯವಾಗಿದೆ ಎಂದು ತಿಳಿಸಿದರು.
ನಾವೀಗ ಕೊರೋನಾ 3ನೇ ಅಲೆಯನ್ನು ಎದುರಿಸುತ್ತಿದ್ದೇವೆ. ನಾವು ಈ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ನಿಭಾಯಿಸಬೇಕು ಮತ್ತು ಇದರಲ್ಲಿ ನಾವು ಯಾವುದೇ ಅಲಕ್ಷ್ಯ ವಹಿಸುವುದು ಸರಿಯಲ್ಲ. ಸರ್ವರ ಆರೋಗ್ಯದ ಹಿತಕ್ಕಾಗಿ ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡಬೇಕು, ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕು. ಈ ಮೂರು ಮಂತ್ರಗಳನ್ನು ನಿರಂತರವಾಗಿ ಪಾಲಿಸಬೇಕು ಎಂದು ರಾಜ್ಯಪಾಲರು ರಾಜ್ಯದ ಜನತೆಗೆ ಕರೆ ನೀಡಿದರು.